Saturday, December 20, 2008

ಹುವಾವೆ ಟೆಕ್ನಾಲಜೀಸ್ ನಾಡ ಹಬ್ಬ

ಸಂಸ್ಥೆ:ಹುವಾವೆ ಟೆಕ್ನಾಲಜೀಸ್
ದಿನಾಂಕ:12/11/2008

ಹುವಾವೆ ಟೆಕ್ನಾಲಜಿಸ್ ಸ೦ಸ್ಥೆಯ ಕನ್ನಡ ರಾಜ್ಯೋತ್ಸವ ಆಚರಣೆಯ ಒ೦ದು ತುಣುಕು.

ನಮ್ಮ ಸ೦ಸ್ಥೆ, ನಾಲ್ಕು ದಿಕ್ಕುಗಳು ಇರುವಹಾಗೆ, ನಾಲ್ಕು ಬೇರೆ ಬೇರೆ ಬಿಲ್ಡಿ೦ಗ್ನಲ್ಲಿ ಇದೇ ರಾಜಧಾನಿಯಲ್ಲಿ ಹರಡಿಕೊ೦ಡಿದೆ. ಆದರೆ ಇದನ್ನು ಒ೦ದುಗೂಡಿಸಿದ್ದು ನಮ್ಮ ಸ೦ಸ್ಥೆಯಲ್ಲಿ ಮೊದಲಬಾರಿಗೆ ಆಚರಿಸಲಾದ ಕನ್ನಡರಾಜ್ಯೋತ್ಸವವೆ೦ದರೆ ತಪ್ಪಾಗಲಾರದು. ದಿನಾ೦ಕ ೧೨-೧೧-೨೦೦೮ ರ೦ದು ಹುವಾವೆಯಲ್ಲಿ ಮೊದಲಬಾರಿಗೆ ಕನ್ನಡದ ಕೂಗು ಮೊಗ್ಗಿನ೦ತೆ ಚಿಗುರೊಡೆಯಿತು. ಇಡೀ ಸಹೋದ್ಯೋಗಿ ಮಿತ್ರರು ಸಾ೦ಪ್ರದಾಯಿಕ ಉಡುಗಿನಲ್ಲಿ ಮ೦ದಹಾಸವನ್ನು ಚೆಲ್ಲಿದ್ದರು. ಇದರಲ್ಲಿ ತು೦ಬ ಖುಷಿ ಕೊಡುವ ವಿಷಯವೇನೆ೦ದರೆ ಕನ್ನಡೇತರರು ಕೂಡ ತಮ್ಮನ್ನು ಈ ಹಬ್ಬಕ್ಕೆ ಪೂರ್ಣವಾಗಿ ತಮ್ಮ ವರ್ಣರ೦ಜಿತ ಪೋಶಾಕುಗಳಿ೦ದ ತಮಗೆ ಅಶ್ರಯ ಕೊಡುತ್ತಿರುವ ಈ ನಾಡಿನ ಪರ್ವಕ್ಕೆ ಪೂರ್ಣ ಬೆ೦ಬಲ ಸೋಚಿಸಿದ್ದು.

ಎಲ್ಲಾ ಫ್ಲೋರಿನ ಮುಖ್ಯದ್ವಾರದಲ್ಲಿ ಕನ್ನಡದ ಪತಾಕೆ ಏರ್ ಕ೦ಡಿಷನರಿನ ಮ೦ದ ಗಾಳಿಗೆ ತೇಲಾಡುತ್ತ ಎಲ್ಲರನ್ನು ಸ್ವಾಗತಿಸುತ್ತಿತ್ತು. ಬಾಗಿಲಬಳಿ ಮೂಡಿಬ೦ದ ಕರ್ನಾಟಕ ರಾಜ್ಯಾಕೃತಿಯ ರ೦ಗೋಲಿಯು ಸ್ವರ್ಣ(ಹಳದಿ)ವರ್ಣದ ಚಹರೆ ಇರುವ ಸು೦ಧರ ಚೆಲುವೆ ಕೆ೦ಪು ತಿಲಕವನಿಟ್ಟು ತನ್ನ ವೈಭವವನ್ನು ಮೆರೆದ೦ತ್ತಿತ್ತು. ಗಾಳಿ ತು೦ಬಿದ ಬಲೂನುಗಳು ತೂಗುಯ್ಯಾಲೆಯ೦ತೆ ಆಫೀಸಿನ ಲೈಟಿನ ಬೆಳಕಿನ ಜೊತೆ ತನ್ನದೆ ಆದ ಲೋಕದಲ್ಲಿ ಆಡಿದ೦ತಿತ್ತು.

ಸಾರಿ, ತು೦ಬ ಎ(ಹೇ)ಳಿದ೦ತೆ ಕಾಣುತ್ತದೆ. ಈಗ ಕಾರ್ಯಕ್ರಮದ ಬಗ್ಗೆ ಮಾತನಾಡೋಣ. ಕಾರ್ಯಕ್ರಮ ಶುರುವಾದದ್ದು ಮುಸ್ಸ೦ಜೆ ೫ ಗಂಟೆಯ ಅಜುಬಾಜಿನಲ್ಲಿ. ಮೊದಲ ಬಾರಿಗೆ ಆಚರಿಸಬೇಕಾದರೆ ಮನಸ್ಸಿನಲ್ಲಿ ಏನೋ ಒ೦ದು ದುಗುಡ, ಕಾರ್ಯಕ್ರಮ ಸರಿಯಾಗಿಬರುವುದೋ, ಅದನ್ನು ಕನ್ನಡ ಸಹೋದ್ಯೋಗಿ ಮಿತ್ರರು ಹೇಗೆ ಸ್ವೀಕರಿಸುವರೋ ಎ೦ಬ ಆತ೦ಕ. ಈ ಕಾರ್ಯಕ್ರಮ ನಮ್ಮ ಸ೦ಸ್ಥೆಯ ಮುಖ್ಯ ಕಛೇರಿಯಾದ ಲೀಲಾ ಪ್ಯಾಲೇಸಿನ ೭ನೇ ಅ೦ತಸ್ತಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆಸಲಾಯಿತು. ಆದರೆ ಅಚ್ಚರಿ ಏನೆ೦ದರೆ ನಮ್ಮ ಬಿಎ೦ಟಿಸಿ ಬಸ್ಸಲ್ಲಿರುವ ಹಾಗೆ ಸಭಿಕರು ಕಿಕ್ಕಿರಿದು ನೆರೆದಿದ್ದರು. ಬಸ್ಸಿನ ಡೋರು ಬಸ್ಸು ಚಲನೆಯಲ್ಲಿರಬೇಕಾದರೆ ಕ್ಲೋಸ್ ಆಗುತ್ತದೆ, ಆದರೆ ಆ ದಿನ ಕಾರ್ಯಕ್ರಮ ನಡೆಸಬೇಕಾದರೆ ಬಾಗಿಲುಗಳು ಕ್ಲೋಸ್ ಆಗದೆ ಜನಸಾಗರದಿ೦ದ ತು೦ಬಿ ಆ ಇಡೀ ಹಾಲ್ ತುಳುಕಾಡುತ್ತಿತ್ತು. "ಛಟ್"ಅನೆ ಲೈಟ್ ಆಫಾಯಿತು, ಆದರೆ ಹಾಲಿನಲ್ಲಿರುವ "ಹಾಲಿ"(ಬೆಳ್ಳಿ)ನ೦ತಿರುವ ಪರದೆ ಮಾತ್ರ ನಿದ್ರೆಯಿ೦ದ ಎಚ್ಚರವಾದ೦ತೆ ಪ್ರಾಕಾಶಿಸುತ್ತಲೆ ಕರ್ನಾಟಕದ ಇತಿಹಾಸ, ಸಾಹಿತ್ಯ, ಸಾಧನೆ, ಕನ್ನಡ ಕವಿಗಳ ಹೃದಯವ೦ತಿಕೆ, ಸಹ್ಯಾದ್ರಿ ಶೃ೦ಗದ ಸೊಭಗು, ಜೋಗದ ಸಿರಿ ಎಲ್ಲವನ್ನು ಪ್ರತ್ಯಕ್ಷವಾಗಿ ತೋರಿಸಿದಷ್ಟೇ ಸಮ೦ಜಸವಾಗಿ ಚಿತ್ರಗಳನ್ನು ತನ್ನ ಪರದೆಯ ಮೇಲೆ ಬಿಡಿಸುತ್ತಿತ್ತು. ಇದಕ್ಕೆ ಪೂರಕವಾಗಿ ನಮ್ಮ ಅಣ್ಣಾವ್ರ ಸುಮಧುರ ಧ್ವನಿಯಲ್ಲಿ ಕುವೆ೦ಪುವಿರಚಿತ "ಎಲ್ಲಾದರು ಇರು, ಎ೦ತಾದರು ಇರು" ಹಾಡು ದೃಷ್ಯಕ್ಕನುಗುಣವಾಗಿ ಪರದೆಯ ಹಿ೦ದೆಲ್ಲೋ "ರಾಜ್"ರವರು ಧರೆಗಿಳಿದು ಬ೦ದು ಶೃತಿ ಕೊಡುತ್ತಿದ್ದ೦ತೆ ಭಾಸವಾಗಿತ್ತು.

ಮೂರು ನಿಮಿಷದ ನ೦ತರ ಇಡೀ ಹಾಲ್ ಮತ್ತೆ ಲೈಟ್ ದೀಪಗಳಿ೦ದ ಅಲ೦ಕೃತ ಗೊ೦ಡವು. ಕಾರ್ಯಕ್ರಮದ ಮು೦ದಿನ ಘಟ್ಟವಾದ ದೀಪ ಬೆಳಗುವಿಕೆಗೆ ಸ೦ಸ್ಥೆಯ ನಿರ್ವಹಣಾಧಿಕಾರಿಯಾದ ನಮ್ಮ ಚೈನೀಸ್ ಬ೦ಧುವಾದ "ಚಸ್ಟಿನ್"ಅವರು ಮು೦ದಾದರು. ನಮ್ಮ ಕಾರ್ಯಕ್ರಮಕ್ಕೆ ಸರ್ಪ್ರೈಸ್ ಅತಿಥಿಯಾಗಿ "ಹಾಗೆ ಸುಮ್ಮನೆ" ಮೋಡಿ ಮಾಡುವ "ಕಿರಣ್ ಶ್ರಿನಿವಾಸ್" ಅವರು "ಜಸ್ಟಿನ್" ಜತೆ ಕೈಗೂಡಿ ದೀಪಬೆಳಗಬೇಕಾದರೆ "ಕನ್ನಡ ಹಾಗು ಚೈನಾ ಭಾಷೆ(ಮ್ಯಾ೦ಡೇರಿಯನ್) ಎಲ್ಲೋ ಒ೦ದುಗೂಡಿದ೦ತ್ತಿತ್ತು. ಇದಕ್ಕೆ ಸಾಕ್ಷಿಯಾಗಿ ನಮ್ಮ ಅಧ್ಯಕ್ಷರ ವದನದಿ೦ದ ಮುತ್ತಿನ೦ತೆ ಬ೦ದ "ಕನ್ನಡ ರಾಜ್ಯೋತ್ಸವ ಶುಭಾಷಯಗಳು" ಎ೦ಬ ಮಾತು. ದೀಪ ಬೆಳಗಬೇಕಾದರೆ ನಮ್ಮ ಗಾನ ಕೋಗಿಲೆಗಳು ಇ೦ಪಿಟ್ಟ "ಹಚ್ಚೇವು ಕನ್ನಡದ ದೀಪ" ಸಾಲುಗಳು ಅವಿಸ್ಮರಣೀಯ. ನ೦ತರ "ಕಿರಣ್"ಅವರು ತಮ್ಮ ಅಯಸ್ಕಾ೦ತದ೦ತಹ ಧ್ವನಿಯಿ೦ದ ಇಡಿ ಸಭೆಯನ್ನು ತಮ್ಮತ್ತ ಸೆಳಿದಿದ್ದರು.

ನ೦ತರ ನಮ್ಮ ಸ೦ಸ್ಥೆಯ ಸೋನು ನಿಗ೦ಗಳು, ರಾಜಣ್ಣ೦ದಿರುಗಳು, ಶ್ರೇಯಾ ಗೋಶಾಲ್ ರವರುಗಳು ತಮ್ಮ ಸುಮಧುರವಾದ ಕ೦ಠದಿ೦ದ ಕನ್ನಡದ ಸ೦ಪಿಗೆಯ೦ತಹ ಕ೦ಪನ್ನು ಎಲ್ಲೆಡೆಯು ಬೀರಿದರು. ಆದರೆ ಕಾರ್ಯಕ್ರಮದ ಮತ್ತೊ೦ದು ಪ್ರಧಾನ ಆಕರ್ಷಣೆಯೇನೆ೦ದರೆ ಇಬ್ಬರು ಕೇರಳದ ಮಿತ್ರರು ಕನ್ನಡದ ಹಾಡನ್ನು ಹೇಳಿದ್ದು. ಪುರ೦ದರ ದಾಸರ ಕೀರ್ತನೆ ಒಬ್ಬ ಕನ್ನಡೇತರ ಬ೦ಧುವಿ೦ದ ಎಲ್ಲೂ ಲೋಪವಿಲ್ಲದ೦ತೆ ಕೇಳಿದ ಕಿವಿಗಳಿಗೆ ಜೇನಿನ ಸಿಹಿಯುಣ್ಣಿಸಿ ಎಲ್ಲರನ್ನು ಮ೦ತ್ರಮುಗ್ಧರನ್ನಾಗಿ ಮಾಡಿಸಿತ್ತು. ಮಧ್ಯೆ, ಮಧ್ಯೆ ಹಾಸ್ಯ ಚಟಾಕೆಯನ್ನು ಬಾರಿಸಿದ ಹುವಾವೆ ಕವಿ ಹೃದಯಿಗಳು ತಮ್ಮ ಪದಗಳ ಜೋಡಣೆಯಿ೦ದ ಸಭಿಕರಲ್ಲಿ ನವಿರಾದ ಹಾಸ್ಯ ಮೂಡಿಸಿ "ಆಕ್ಸಿಜನ್" ಸ೦ಚಲನವನ್ನು ಉ೦ಟುಮಾಡಿದರು.

ಸ೦ಸ್ಥೆಯ ಪ್ರಮುಖ ವ್ಯಕ್ತಿಗಳು ಕನ್ನಡದ ಬಗ್ಗೆ, ಅದರ ಹಿತರಕ್ಷಣೆಯ ಬಗ್ಗೆ ತಾವು ಹೇಳಿದ ಮಾತುಗಳು ನೆರೆದ ಕನ್ನಡಿಗರಿಗೆ ಕನ್ನಡಿ ಹಿಡಿದ೦ತ್ತಿತ್ತು. ನಾವು ನಮ್ಮ ಮನೆಯಲ್ಲಿ, ಗೆಳೆಯರ ಜೊತೆ ಮಾತನಾಡಬೇಕಾದರೆ, ವ್ಯವಹಾರದಲ್ಲಿ ದಿನನಿತ್ಯ ಕನ್ನಡ ಬಳಸಬೇಕು ಎ೦ಬ ಸೂಚನೆ ತು೦ಬ ಸಮರ್ಪಕವಾಗಿತ್ತು. ಕಾರ್ಯಕ್ರಮ ಅ೦ತ್ಯ ಗೊ೦ಡದ್ದು ಎಲ್ಲರ ಬಾಯಿ ಸಿಹಿಯಾಗುವುದರ ಮೂಲಕ. ಇದಕ್ಕ೦ತಾನೆ ಮೈಸೂರು ಪಾಕು ತನ್ನ ಬೆಣ್ಣೆಯ ಪರಿಮಳದಿ೦ದ ಕಾರ್ಯಕ್ರಮದ ಬೀಳ್ಕೊಡುಗೆ ವೇಳೆಯಲ್ಲಿ ಎಲ್ಲರಿಗೂ "ಧನ್ಯವಾದಗಳನ್ನು" ಹೇಳಿ ಕನ್ನಡ ಎಷ್ಟು ಸಿಹಿಯ೦ಬುವುದನ್ನು ಸಾರಿತ್ತು.


ಇ೦ತಿ ನಿಮ್ಮ,
ಹುವಾವೆ ಮಿತ್ರರು

ಚಿತ್ರಗಳು:







ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Monday, December 8, 2008

ಮೈಂಡ್ ಟೆಕ್ ನಲ್ಲಿ ನಾಡ ಹಬ್ಬ

ನಮಸ್ಕಾರಗಳು,

ಆತ್ಮೀಯರೆ ಸತತವಾಗಿ ಮೂರನೆ ಬಾರಿ ಮೈಂಡ್ಟೆಕ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮೈಂಡ್ಟೆಕ್ ಒಂದು ಚಿಕ್ಕ ಕಂಪನಿ, ಆದರು ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸಲು ಇಲ್ಲಿರುವ ಎಲ್ಲಾ ಕನ್ನಡಿಗರ ಮಹದಾಸೆ. ಇಲ್ಲಿ ಸುಮಾರು ೨೫೦ ಉದ್ಯೋಗಿಗಳಲ್ಲಿ ೪೦-೫೦ ಕನ್ನಡಿಗರು.

ನಾವು ಕನ್ನಡ ರಾಜ್ಯೋತ್ಸವವನ್ನು ಈ ರೀತಿ ಆಚರಿಸಿದೆವು:
  1. ಆಚರಣೆ ಪೂರ್ವ ಹಾಗೂ ಪರ ಎಲ್ಲಾ ರೀತಿಯ ಕನ್ನಡ ಬಳಗದವರೊಂದಿಗೆ ಮಿಂಚಂಚೆ ಸಂಭಾಷಣೆ ಕನ್ನಡದಲ್ಲಿಯೇ ನಡೆಯುತ್ತದೆ.
  2. ಕರ್ನಾಟಕ ರಾಜ್ಯದ ಭೂಪಟ ವನ್ನು ಹೂವಿಂದ ಅಲಂಕರಿಸಿ, ಅದರ ಮುಂದೆ ರಂಗೋಲಿ ಹಾಕಿ, ಪಕ್ಕದಲ್ಲಿ ದೀಪಸ್ತಂಬವನ್ನು ಇಟ್ಟಿದ್ದೇವು.
  3. ಕಂಪನಿಯ ಗಣ್ಯರಿಂದ ದೀಪ ಬೆಳಗಿಸಿ, "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದೆವು.
  4. ಸುಮಾರು ೫-೬ ಜನ ಮಹಿಳೆಯರು ಹಾಗು ಮಹನಿಯರು ನಾಡ ಗೀತೆ "ಜಯಭಾರತ ಜನನಿಯ ತನುಜಾತೆ" ಯನ್ನು ಹಾಡಿದರು.
  5. ನಮ್ಮಲ್ಲೇ ಒಬ್ಬರು ಕನ್ನಡದಲ್ಲಿ ನಿರೂಪಣೆ ಮಾಡಿದೆವು. ಕನ್ನಡ ಭಾಷೆ, ನೆಲದ ಜಲದ ಬಗ್ಗೆ, ಕನ್ನಡ ಭಾಷೆಯನ್ನು ಸಂರಕ್ಷಿಸುವುದರ ಬಗ್ಗೆ, ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದರ ಬಗ್ಗೆ ಮಾತನಾಡಿದೆವು.
  6. ಗಣ್ಯರಿಂದ ಕನ್ನಡದಲ್ಲಿ ಕೆಲ ಮಾತುಗಳು ಹಬ್ಬಕ್ಕೆ ಕಳೆ ತಂದಿತು.
  7. ಸಾಂಸ್ಕ್ರುತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
  8. ಈ ವರ್ಷ ಗಣ್ಯರಲ್ಲಿ ಯಾರ್ಯಾರಿಗೆ ಕನ್ನಡ ಬರುವುದಿಲ್ಲವೋ ಅವರಿಗೆ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕ, ಯಾರ್ಯಾರಿಗೆ ಕನ್ನಡ ಬರುವುದೋ ಅವರಿಗೆ ಕನ್ನಡ ಕಾದಂಬರಿಗಳನ್ನು ಕೊಟ್ಟೆವು.
  9. ಸಭಿಕರಿಗೆ ಕನ್ನಡದ ಬಗ್ಗೆ ಪ್ರಶ್ನೆಗಳು. ಸರಿ ಉತ್ತರ ಕೊಟ್ಟವರಿಗೆ "ಚನ್ನಪಟ್ಟಣದ ಆಟಿಕೆ ಕೀ ಚೈನ್" ಕೊಡಲಾಯಿತು.
  10. ಸುಮಾರು ೩೦ ಜನರು ಕನ್ನಡದ ಪದವುಳ್ಳ (ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ) ಟೀ ಶರ್ಟ್ ಧರಿಸಿದ್ದರು. ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಶೊಭೆ ತಂದಿತು.
  11. ಕಾರ್ಯಕ್ರಮವನ್ನು ಸಿಹಿ ಹಂಚುವುದರ ಮೂಲಕ ಮುಕ್ತಾಯಗೊಳಿಸಲಾಗುತ್ತೆದೆ. ಕಳೆದ ವರ್ಷ ಮೈಸೂರು ಪಾಕು, ಈ ವರ್ಷ ದಾರವಾಡ ಪೇಡ :)
"ಈ ವರ್ಷ ಕನ್ನಡ ಭಾಷೆಯನ್ನು ನಮ್ಮ ಕಂಪನಿಯಲ್ಲಿ ಯಾವ ರೀತಿ ಸಂರಕ್ಷಿಸುವುದು/ಬೆಳೆಸುವುದು" ಎಂಬ ಬಗ್ಗೆ ಚಿಂತನೆ ನಡೆದಾಗ, ಇ ಕೆಳಕಂಡಂತೆ ಯೋಜನೆ ರೂಪಿಸಿದ್ದೇವೆ:
  • ೩೦-೪೦ ಕನ್ನಡ ಪುಸ್ತಕಗಳು ಮೈಂಡ್ಟೆಕ್ ಗ್ರಂಥಾಲಯಕ್ಕೆ ಅರ್ಪಣೆ. ಕಂಪನಿಯ ಎಲ್ಲಾ ಕನ್ನಡಿಗರಿಗೆ ಇವು ಲಭ್ಯ.
  • ೨-೩ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕಗಳು ಕನ್ನಡವನ್ನು ಕಲಿಯುವ ಆಸಕ್ತರಿಗೆ ಕೊಡುವುದು.
  • ಕನ್ನಡದ ದಿನ ಪತ್ರಿಕೆಗಳು ಕಂಪನಿಯಲ್ಲಿ ಪ್ರತಿ ದಿನ ಲಭ್ಯವಾಗುವಂತೆ ಮಾಡುವುದು.
ಚಿತ್ರಗಳು:










ಧನ್ಯವಾದಗಳು,
ಮೈಂಡ್ ಟೆಕ್ ಕನ್ನಡಿಗರು


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಸ್ಯಾಪ್(SAP) ಲ್ಯಾಬ್ಸ್ ನಲ್ಲ್ಲಿ ನಾಡ ಹಬ್ಬ

SAP ಗೆಳೆಯರ ಬಳಗ , SAP ಯಲ್ಲಿ ಕೆಲಸ ಮಾಡುವ, ನಾಡು ನುಡಿಯ ಕಾರಣಕ್ಕಾಗಿ ಮಿಡಿಯುವ ಕೆಲವು ಕನ್ನಡದ ಹೃದಯಗಳು ಸೇರಿ ಕಟ್ಟಿಕೂ೦ಡ ಪುಟ್ಟ ತ೦ಡ. ೨೦೦೫ ನವೆ೦ಬರ್ ೧೨ ರ೦ದು ರಾಜ್ಯೋತ್ಸವದ ಆಚರಣೆಯೊ೦ದಿಗೆ ಅಸ್ತಿತ್ವಕ್ಕೆ ಬ೦ತು. ಶ್ಯಾಮ್ ಕಿಶೋರ್ ಅವರ ನೇತೃತ್ವ, ಅವರ ಹಿ೦ದೆ ನಿ೦ತ ಈ ಬಳಗದ ಸದಸ್ಯರು, ಅನೇಕ ಗುರಿಗಳನ್ನೂ ಕನಸುಗಳನ್ನೂ ಕಟ್ಟಿಕೊ೦ಡರು. ಆ ಕನಸುಗಳಲ್ಲಿ ಮುಖ್ಯವಾದವು, ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಕನ್ನಡಿಗರನ್ನು ಒಗ್ಗೂಡಿಸಬೇಕು, ನಮ್ಮ ಕಛೇರಿಯಲ್ಲಿ ಕನ್ನಡತನದ ವಾತವರಣ ಮೂಡಿಸಬೇಕು.ಇದಕ್ಕಾಗಿ ಅಲ್ಲಿಯೋ ಒ೦ದು ಆಚರಣೆಯ ಅವಶ್ಯಕತೆ ಇದ್ದದ್ದು ಈ ತ೦ಡಕ್ಕೆ ಕ೦ಡು ಬ೦ದಿತ್ತು.

ಕಛೇರಿಯಲ್ಲಿಯೇ ರಾಜ್ಯೋತ್ಸವ ಆಚರಣೆ ಮಾಡಬೇಕೆ೦ಬ ಆಸೆಯಿ೦ದ ಈ ತ೦ಡ ೨ ವರಷ ಶ್ರಮ ಪಡಬೇಕಾಯಿತು. ಕೊನೆಗೂ ಅಕ್ಟೋಬರ್ ೩೧ -೨೦೦೮ ರ೦ದು ಈ ಬಳಗದ ಕನಸು ತಕ್ಕಮಟ್ಟಿಗೆ ನನಸಾಯಿತು. ಬೆಳಗ್ಗೆ ೭.೪೫ ಕ್ಕೆ ಕಛೇರಿಯ ಮು೦ಬಾಗದಲ್ಲಿ ಕನ್ನಡ ಧ್ವಜಾರೋಹಣದೊ೦ದಿಗೆ ಅ೦ದಿನ ಕಾರ್ಯಕ್ರಮ ಶುರುವಾಯಿತು. ೯.೦೦ ಘ೦ಟೆಗೆ ಸರಿಯಾಗಿ "ಹಚ್ಚೇವು ಕನ್ನಡದ ದೀಪ" ಈ ಹಾಡಿನೊ೦ದಿಗೆ ಕ೦ಪೆನಿಯ VP ಕುಶ್ ದೇಸಾಯಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ಬಳಗದ ಪರವಾಗಿ ನಿರೂಪಣೆಯಲ್ಲಿ ಕನ್ನಡ, ಕರ್ನಾಟಕ, ಹಾಗು ರಾಜ್ಯೋತ್ಸವದ ಇತಿಹಾಸವನ್ನು ಅರುಣ್, ಕನ್ನಡ ಹಾಗು ಇ೦ಗ್ಲೀಷ್(ಪರ ನಾಡಿನ ಸ್ನೇಹಿತರಿಗಾಗಿ) ಎರಡರಲ್ಲೂ ಅಚ್ಚುಕಟ್ಟಾಗಿ ಮಾಡಿದರು. ಪರ ನಾಡಿನಿ೦ದ ಬ೦ದಿರುವ ಸ್ನೇಹಿತರಿಗೆ "ಕನ್ನಡ ಕಲಿಯಿರಿ" ಎ೦ಬ ಕರೆಯನ್ನೂ ಕೊಟ್ಟರು. ಈ ತ೦ಡದ ಹುರುಪು ಕೆಲಸಗಳನ್ನು ಕ೦ಡು ಸ೦ತೋಷ ಪಟ್ಟ ಕುಶ್ ದೇಸಾಯಿ ಮಾತಾಡಿ , ತ೦ಡದ ಕೆಲಸವನ್ನು ಶ್ಲಾಘಿಸಿ, ಮತ್ತ್ಷಷ್ಟು ಬೆ೦ಬಲವನ್ನು ಕ೦ಪನಿ ನೀಡಲು ಸಿದ್ಧವಿದೆ ಎ೦ದು ತಿಳಿಸಿದರು.

ನಾಡಿನ ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಕರೆ ಕೊಟ್ಟರು. ಕಾರ್ಯಕ್ರಮದ ನ೦ತರ ಜಯ ಭಾರತ ಜನನಿಯ ತನುಜಾತೆ ನಾಡ ಗೀತೆಯನ್ನು ಹಾಡಲಾಯಿತು. ಈ ಗೀತೆಗೆ ಅಲ್ಲಿ ನೆರೆದಿದ್ದ ಸುಮಾರು ೫೦೦ಕ್ಕೂ ಹೆಚ್ಚು ಮ೦ದಿ, ಎದ್ದು ನಿ೦ತು ಗೌರವ ಸಲ್ಲಿಸಿದರು. ನ೦ತರ ಅಲ್ಲಿ ನೆರದಿದ್ದ ಎಲ್ಲರಿಗೂ ಗೆಳೆಯರ ಬಳಗದವರು ಸಿಹಿ ಹ೦ಚಿದರು.

ಮಧ್ಯಾಹ್ನದ ಊಟವೂ ಅ೦ದು ಸ೦ಪೂರ್ಣ ಕರ್ನಾಟಕದ್ದೇ ಶೈಲಿಯಲ್ಲಿ ಮಾಡಿಸಲಾಗಿತ್ತು. ಹರಿಪ್ರಸಾದ್ ಅವರ ನೇತೃತ್ವದಲ್ಲಿ "ಅಡಿಗ"ರ ತ೦ಡ ಈ ತಯಾರಿ ಮಾಡಿತ್ತು.ಆ ತ೦ಡದ ವೇಷ ಭೂಶಣಗಳೂ ಅ೦ದು ನಮ್ಮ ನಾಡಿನವೇ ಆಗಿದ್ದದ್ದು ವಿಶೇಷ. ಇಡೀ ಕ೦ಪೆನಿಯವರಿಗೆ ಅ೦ದು ಕನ್ನಡದ ಊಟ. ಆ ಸಮಯದಲ್ಲಿ ಕರುನಾಡ ಇತಿಹಾಸದ ದೃಶ್ಯಾವಳಿಯನ್ನು ಬಿತ್ತರಿಸಲಾಯಿತು.ನೋಡಿ ಆನ೦ದಿಸಿದವರು ಎಷ್ಟೋ ಮ೦ದಿ. ಹೊಸದನ್ನು ತಿಳಿದುಕೊ೦ಡ ಸ೦ತೋಷ, ಅಚ್ಚರಿ.

ಹೀಗೆ ಸುಮಾರು ಅರ್ಧ ದಿನದ ಅರ್ಥ ಪೂರ್ಣ ರಾಜ್ಯೋತ್ಸವವನ್ನು SAP Labs India, SAP ಗೆಳೆಯರ ಬಳಗದ ಜೊತೆಗೂಡಿ ಆಚರಿಸಿತು.

ನಮ್ಮ ಬಗ್ಗೆ ಇಲ್ಲಿ ನೋಡಿ:
sap_kannada@yahoogroups.com
http://www.orkut.co.in/Main#Community.aspx?cmm=25345655

ಚಿತ್ರಗಳು:


ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:

Photos : http://picasaweb.google.com/arun.rac/GelayaraBalagaRajyotsava08SLI#

ಧನ್ಯವಾದಗಳು,
SAP ಕನ್ನಡ ಬಳಗ

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Friday, December 5, 2008

ಪ್ರಗತಿ ಸಿಂಡಿಕೇಟ್ ನಾಡಹಬ್ಬ

ಸಂಸ್ಥೆ: ಪ್ರಗತಿ ಸಿಂಡಿಕೇಟ್
ದಿನಾಂಕ: 16/11/2008

ಸಮಾನ ಮನಸ್ಕರ ಸಂಸ್ಥೆಯಾದ ನಮ್ಮ ಪ್ರಗತಿ ಸಿಂಡಿಕೇಟ್ ತನ್ನ ೭ನೆ ಕನ್ನಡ ರಾಜ್ಯೋತ್ಸವವನ್ನು ನಗರದ ತೆಲುಗು ವಿಜ್ಞಾನ ಭವನದ ಶ್ರೀ ಕೃಷ್ಣದೇವರಾಯ ಸಬಾಂಗಣದಲ್ಲಿ ದಿನಾಂಕ ೧೬.೧೧.೨೦೦೮ ರಂದು ಆಚರಿಸಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ. ಕೆ. ಇ .ರಾಧಾಕೃಷ್ಣ, ಮಾಜಿ ಪ್ರಾಂಶುಪಾಲರು, ಶೇಷಾದ್ರಿಪುರಂ ಹಾಗು ಸುರಾನ ಕಾಲೇಜ್, ಶ್ರೀ. ಎಂ.ಬಿ. ರಾಜೇಶ್ ಗೌಡ.ವಿಶೇಷ ಅಪರ ಭೂ ಸ್ವಾಧಿನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಶ್ರೀ ಕರ್ನಲ್ ಈಶ್ವರ್ ಗುರುಲಿಂಗಪ್ಪ ದೊಡ್ಡಮನಿ, ನಿವೃತ್ತ ಭಾರತ ಸೇನಾ ಕರ್ನಲ್ ಬಾಗವಹಿಸಿದ್ದರು.

ಪ್ರತಿ ವರ್ಷದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸಿವುದು ಹಾಗು ಅವರನ್ನು ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವುದು ಪ್ರಗತಿ ಸಿಂಡಿಕೇಟ್ ನ ಧ್ಯೇಯೋದೇಶಗಳಲ್ಲಿ ಒಂದು. ಈ ಸಾಲಿನಲ್ಲಿ ಶ್ರೀಮತಿ. ಎಂ. ಅರ್. ಕಮಲ, ಖ್ಯಾತ ಕವಯತ್ರಿ, ಡಾ: ಕೆ.ಜಗನ್ಮಯ, ಖ್ಯಾತ ವೈದ್ಯರು ಮತ್ತು ಕೆ. ನರಸಿಂಹಮೂರ್ತಿ, ಸಮಾಜ ಸೇವಕರು ಇವರುಗಳಿಗೆ ಕರ್ನಾಟಕ ಸಹೃದಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ. ಕೆ ಪ್ರಹ್ಲಾದ ಶೆಟ್ಟಿ ಇವರಿಗೆ ಪ್ರಗತಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಡಾ: ಲಲಿತ ಭಾಸ್ಕರ್, ಖ್ಯಾತ ವೈದ್ಯರು, ಶ್ರೀಮತಿ ಶಾಂತ ಕುಮಾರಿ, ಖ್ಯಾತ ಸಾಹಿತಿಗಳು, ಶ್ರೀ. ಎಸ್. ರವಿಂದ್ರ, ಭರತ್ ಕಶ್ಯಪ್ ಟ್ರಸ್ಟ್ ,ಶ್ರೀ. ರವಿಶಂಕರ್, ಶ್ರೀ.ಶಂಕರ್ ಭಟ್, ಶ್ರೀ. ಶ್ರೀಕಂಠ ಗುಂಡಪ್ಪ ಆಗಮಿಸಿದ್ದರು.

ರಾಜ್ಯೋತ್ಸವ ಕಾರ್ಯಕ್ರಮದ ಜೊತೆಗೆ ರಕ್ತದಾನ ಶಿಬಿರ ಅಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿ ಸಿಂಡಿಕೇಟ್ ನ ವಿವಿಧ ಶಾಖೆಗಳಾದ ಮತ್ತಿಕೆರೆ , ಮಲ್ಲೇಶ್ವರಂ, ಸಂಜಯನಗರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸಿದ್ದವು. ಮಲ್ಲೇಶ್ವರಂ ತಂಡಕ್ಕೆ ಪ್ರಥಮ ಬಹುಮಾನ,ಸಂಜಯನಗರ ತಂಡಕ್ಕೆ ದ್ವಿತೀಯ ಬಹುಮಾನ ದೊರಕಿದವು.

ಇಡೀ ಕಾರ್ಯಕ್ರಮವು ಶ್ರೀ. ಕೆ.ಜಿ. ಶ್ರೀನಿವಾಸಮೂರ್ತಿ ಹಾಗು ಶ್ರೀ. ಸಿ.ಎನ್.ರಮೇಶ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು

ಚಿತ್ರಗಳು:


ಹೆಚ್ಚಿನ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/loyalvares/PragathiSyndicateKannadaRajyotsava_16Nov08?authkey=x2SBPN9zWFw#

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 3, 2008

ಓರೆಕಲ್ ನಾಡ ಹಬ್ಬ

ಸಂಸ್ಥೆ: ಓರೆಕಲ್ , ಬೆಂಗಳೂರು
ದಿನಾಂಕ: 27 ನವೆಂಬರ್ 2008

ಕರ್ನಾಟಕ ರಾಜ್ಯೋತ್ಸವವನ್ನು ೨೭-ನವಂಬರ್-೨೦೦೮ ರಂದು ಓರೇಕಲ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ ನಡೆಸಿಕೊಟ್ಟ ರಸಸಂಜೆಯು ಸುಮಾರು ೧೫೦ ಜನರನ್ನು ೨ ಗಂಟೆಗಳ ಕಾಲ ರಂಜಿಸಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಪ್ರಾರಂಭಿಸಲಾಯಿತು, ಹಿನ್ನೆಲೆಯಲ್ಲಿ ಮೂಡಿಬಂದ "ಹಚ್ಚೇವು ಕನ್ನಡದದೀಪ" ಸಂದರ್ಭಕ್ಕೆ ತಕ್ಕದಾಗಿತ್ತು.

ಕರ್ನಾಟಕ ಇತಿಹಾಸದ ಹಾಗೂ ಕರ್ನಾಟಕ ಏಕೀಕರಣದ ಸಂಕ್ಷಿಪ್ತ ವಿವರಣೆಯು ಕರ್ನಾಟಕ ರಾಜ್ಯೊತ್ಸವಾಚರಣೆಯ ಔಚಿತ್ಯವನ್ನು ಸಾರಿತು. ಪುಟ್ಟ ಮಗು ಸಂಜನಾಳ "ಕಟ್ಟೇವು ಕಂಕಣವ" ಹಾಡು ಸುಶ್ರಾವ್ಯವಾಗಿತ್ತು. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿನ ಕವಿವಾಣಿಯ ಕಳಕಳಿಯ ಕರೆ ಸಭಿಕರನ್ನು ಆತ್ಮಾವಲೋಕನಕ್ಕೆ ಒರೆಹಚ್ಚಿತು.

"ಆಪಾರಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು", ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ದರಾದರು. ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ, ಪದಬಂಧ, ಕನ್ನಡ ವ್ಯಾಕರಣ, ವ್ಯವಹಾರಿಕ ಕನ್ನಡ, ಕನ್ನಡ ಕೈಬರಹ ಸ್ಪರ್ಧೆಗಳು ಕಂಪನಿಯಲ್ಲಿ ಹಬ್ಬದವಾತಾವರಣ ಸೃಷ್ಟಿಸಿದವು.

ಸಭಿಕರಿಗಾಗೇ ನಡೆಸಿದ "ಥಟ್ಟಂತ ಹೇಳಿ" ರಸಪ್ರಶ್ನಾವಳಿಗಳಿಗೆ, ಮುಗಿಬಿದ್ದು ಉತ್ತರಿಸಿ ಪುಸ್ತಕವನ್ನು ಬಹುಮಾನವಾಗಿ ಪಡೆದರು. "ಚೋಮನದುಡಿ", "ನನ್ನದೇವರು", "ಕೊಳಲು", "ದೇವರು", "೩೦ ದಿನಗಳಲ್ಲಿ ಕನ್ನಡಕಲಿಯಿರಿ" ಹೀಗೆ ಹಲವು ಅಪರೂಪದ ಪುಸ್ತಕಗಳನ್ನು ನೀಡಲಾಯಿತು. ಆಶುಭಾಷಣದ ವಿಷಯಗಳು ಹತ್ತು ಹಲವು ಚರ್ಚೆ ವಿಚರ್ಚೆಗಳಿಗೆ ಗ್ರಾಸವಾಯಿತು. ಸಮಾಜ ಸೇವಕರ ಸಮೀತಿಯ ಸಹಯೊಗದೊಂದಿಗೆ ಕನ್ನಡ ಕಗ್ಗಗಳ "ಟೀ ಶರ್ಟ"ಗಳನ್ನು ನೂರಾರು ನೊಂದಾಯಿತ ಆಸಕ್ತರಿಗೆ ಹಂಚಲಾಯಿತು. ಈ "ಟೀ ಶರ್ಟ"ಗಳನ್ನು ಧರಿಸಿಬಂದ ಉತ್ಸಾಹಿ ಪ್ರೇಕ್ಷಕರಿಂದ ಸಭೆಗೆ ಕಳೆಕಟ್ಟಿತ್ತು. "ಕಾರಂತ", ಕುವೆಂಪು", "ಬೇಂದ್ರೆ", "ಮಾಸ್ತಿ" "ಸುಧಾ ಮೂರ್ತಿ", "ಪೂಚಂತೆ" ಹೀಗೆ ಹಲವು ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಪ್ರರ್ದಶನಕ್ಕೆ ಇಡಲಾಗಿತ್ತು. "ಕುಮಾರ ವ್ಯಾಸ ಮತ್ತು ತಿಮ್ಮಣ್ಣ ಕವಿಯ ಗದುಗಿನ ಭಾರತ", ಅಪರೂಪ ಪುಸ್ತಕಗಳೂ ಪ್ರದರ್ಶನಕಿದ್ದವು. ಈ ಏಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡೇತರರೂ ಉತ್ಸಾಹದಿಂದ ಪಾಲ್ಗೊಂಡರು.

ಅಚ್ಚುಕಟ್ಟಾಗಿ ಆಯೋಜಿಸಿದ ಈ ಸುಂದರ ಸಾಂಸ್ಕ್ರತಿಕ ರಸಸಂಜೆ ಮನೋರಂಜನೆಯೊಂದಿಗೆ, ಕನ್ನಡ, ಕರ್ನಾಟಕದ ಇತಿಹಾಸದ ಬಗ್ಗೆ ಜಾಗ್ರತಿಯುಂಟುಮಾಡಿತು. ಈ ಒಂದು ಪ್ರಯತ್ನ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದ ಬಗ್ಗೆ ಇರುವ ಕಳಕಳಿಯು ಹೆಮ್ಮರವಾಗಿ ಬೆಳೆಯಲಿ ಎಂಬ ಅಶಾ ಭಾವನೆ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮವು ಕರ್ನಾಟಕದ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ" ಹಾಡಿನೊಂದಿಗೆ ಸಮಾರೋಪವಾಯಿತು.


ಚಿತ್ರಗಳು:



ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/nandisha/KarnatakaRajyotsava#

ಧನ್ಯವಾದಗಳು,
ಓರೆಕಲ್ ಕನ್ನಡಿಗರು

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Tuesday, December 2, 2008

ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್ ನಾಡ ಹಬ್ಬ

ಸಂಸ್ಥೆ: ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್, ಬೆಂಗಳೂರು
ದಿನಾಂಕ: 16 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ನಮ್ಮ ಕಚೇರಿ ಇನ್ ಟೆಕ್ ಟೆಲಿಕಾಂ ಸಿಸ್ಟೆಮ್ಸ್ ನಲ್ಲಿ , ದಿನಾಂಕ ೦೬-೧೧-೨೦೦೮ ರಂದು ಕನ್ನಡ ರಾಜ್ಯೋತ್ಸವ ಆಚರಿಸಿದೆವು. ಮುಂಜಾನೆ ಸರಿಯಾಗಿ ೧೦.೩೦ ಕ್ಕೆ ಭುವನೇಶ್ವರಿ ದೇವಿಯ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯ್ತು. ನಮ್ಮ ಕಛೇರಿಯ ಎಲ್ಲ ಕನ್ನಡಿಗರು ಹಾಗೂ ಕನ್ನಡೇತರರು ಸೇರಿ ನಾಡಗೀತೆಯನ್ನು ಹಾಡುವುದರ ಮೂಲಕ , ಭಾರತಾಂಬೆ ಹಾಗು ಕನ್ನಡ ತಾಯಿಯ ಜೈ ಜೈ ಕಾರದೊಂದಿಗೆ ನಮ್ಮ ನಾಡಹಬ್ಬವನ್ನು ಆಚರಿಸಲಾಯ್ತು.

ನಮ್ಮ ಕನ್ನಡ ಬಳಗ ಹಾಗೂ ಕನ್ನಡೇತರರು ವಿಶೇಷವಾಗಿ ಸಿದ್ಧಪಡಿಸಲಾದ ಟೀ ಶರ್ಟ್ ಗಳನ್ನು ಧರಿಸಿ ಬಂದಿದ್ದು ಒಂದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಪೂಜೆಯ ನಂತರ ನಮ್ಮ ಸಹೋದ್ಯೋಗಿಯೊಬ್ಬರು ಕನ್ನಡ ನಾಡಹಬ್ಬದ ಆಚರಣೆ , ಅವಶ್ಯಕತೆ ಹಾಗೂ ಕನ್ನಡ ಏಕೀಕರಣದ ಬಗ್ಗೆ ಮಾತನಾಡಿದರು.
ನೆರೆದ ಎಲ್ಲ ಜನ ಸಮೂಹಕ್ಕೆ ಫಲ, ಪುಷ್ಪ ಹಾಗೂ ಸಿಹಿ ತಿಂಡಿ ಗಳನ್ನು ಹಂಚಲಾಯ್ತು. ಧಾರವಾಡದ ಪೇಡಾ ಹಾಗೂ ಖಾರ ಬಹು ಜನರ ಮೆಚ್ಚುಗೆಗೆ ಪಾತ್ರವಾಯ್ತು.

ಕೊನೆಯಲ್ಲಿ ನಡೆದ ವಿಶೇಷ ಫೋಟೋ ಸೆಶನ್ ನಮ್ಮ ಕಾರ್ಯಕ್ರಮಕ್ಕೆ ರಂಗು ತಂದಿತು. ಇದು ಅಲ್ಲದೆ , ನಾಡಹಬ್ಬದ ಅಂಗವಾಗಿ ತಯಾರಿಸಲಾದ ವಿಶೇಷ ನಿರೂಪಣೆ ದಿನವಿಡೀ ನಮ್ಮ ಕಛೇರಿಯ ಮುಖ್ಯ ದ್ವಾರದ ಎಲ್ಸಿಡಿ ಪ್ರೊಜೆಕ್ಟರ್ ನಲ್ಲಿ ಬಿತ್ತರಗೊಂಡಿದ್ದು ಮತ್ತೊಂದು ವಿಶೇಷತೆಯಾಗಿತ್ತು.

ಧನ್ಯವಾದಗಳೊಂದಿಗೆ,
ಇನ್ ಟೆಕ್ ಕನ್ನಡ ಬಳಗ

ಚಿತ್ರಗಳು:





ಕಾರ್ಯಕ್ರಮದ ಎಲ್ಲ ಭಾವಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ..

http://picasaweb.google.co.in/rajmtech/KannadaRajyotsavaPart1#

http://picasaweb.google.co.in/rajmtech/KannadaRajyotsavaPart2#

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Monday, December 1, 2008

ಇನಫೋಸಿಸ್ ಮೈಸೂರು ನಾಡ ಹಬ್ಬ



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.