Monday, March 1, 2010

ವಿಪ್ರೋದಲ್ಲಿ ಕನ್ನಡ ನಾಡಹಬ್ಬ 2009

ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮುರುವುದು…..
ಎಂಬ ಕವಿವಾಣಿಯಂತೆ ನಿಜವಾದ ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡ ಎಂಬ ಪದ ಕಿವಿಗೆ ಬಿದ್ದೊಡನೆಯೇ ರೋಮಂಚನವಾಗುವುದು.

ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು….
ಎಂಬುದು ಕವಿಯ ಕಂಪುನುಡಿ


ಅದರಂತೆಯೇ ವಿಪ್ರೊ ಸಂಸ್ಥೆಯಲ್ಲಿ ಕನ್ನಡದ ಕಂಪು ಪಸರಿಸುವ  ಕಾರ್ಯ ಕೆಚ್ಚಿನ ಕನ್ನಡಿಗರಿಂದಾಗುತ್ತಿದೆ. ವಿಪ್ರೋದಲ್ಲಿ ಸದ್ದಿಲ್ಲದೇ ವರ್ಷಕ್ಕೊಮ್ಮೆ ವಿಸ್ಮಯ ಎಂಬ ಹೆಸರ ಮೂಲಕ ಕನ್ನಡ ಜಾತ್ರೆ ನಡೆಯುತ್ತಿದೆ, ಕನ್ನಡ ಬಾವುಟಗಳು ಹಾರಾಡುತ್ತವೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಿಂಚನವಾಗುತ್ತದೆ.  ಕಳೆದ ನಾಲ್ಕು ವರ್ಷಗಳಿಂದಲೂ ಸದ್ದಿಲ್ಲದೇ ಮತ್ತು ಸುದ್ದಿಯಾಗದ ಕನ್ನಡ ರಥ ವಿಪ್ರೋದಲ್ಲಿ ವಿಜ್ರಂಭಿಸುತ್ತ ಬಂದಿದೆ.

ಈ ಕನ್ನಡ ರಥದ ಸೂತ್ರಧಾರಿ ನರಸಿಂಗ ರಾವ್. ಇನ್ನು ಇವರಿಗೆ ವಿಸ್ಮಯದ ರೂವಾರಿಯಾಗಿ ರಾಘವೇಂದ್ರ ಕಮಲಾಕರ್ ಸಾಥ್ ನೀಡಿದ್ದಾರೆ . ಇವರಿಬ್ಬರಿಗೂ ಜೈ ಅನ್ನುತ್ತಲೇ ಕನ್ನಡ ಭಾಷಾಭಿಮಾನವನ್ನು ಎತ್ತಿ ತೋರಿಸಲು ಸಮಾನ ಮನಸ್ಸಿನ ಗೆಳೆಯರಿದ್ದಾರೆ. 

  
ಫೆಬ್ರವರಿ 11 ರಂದು ನಡೆದ ವಿಸ್ಮಯ ಕಾರ್ಯಕ್ರಮವು ಆಪ್ತರ, ಸಮಾನಮನಸ್ಕರ, ಅಪ್ಪಟ ಕನ್ನಡಾಭಿಮಾನಿಗಳ ವೇದಿಕೆಯಾಗಿತ್ತೆನ್ನಬಹುದು. ಈ ಬಾರಿ ನಡೆದ ವಿಸ್ಮಯ ಮಾತ್ರ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದು ಸುಳ್ಳಲ್ಲ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಸಾವಿರಾರು ವಿಪ್ರೊ ಕನ್ನಡಿಗರು - ಅಷ್ಟೊಂದು ಕನ್ನಡಿಗರು ವಿಪ್ರೋದಲ್ಲಿದ್ದಾರೆಯೇ ಎಂದು ಅಚ್ಚರಿಯಾಗಬಹುದು.

ಕಳೆದ ಫೆಬ್ರವರಿ 11ರಂದು ನಡೆದ ವಿಸ್ಮಯಕ್ಕೆ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದು ವಿಶೇಷ ಮತ್ತು ವಿಸ್ಮಯ! ಹಾಗಾದರೆ, ಅಷ್ಟೊಂದು ಜನರ ಮುಂದೆ ವಿಸ್ಮಯದ ಅವತಾರವಾದರೂ ಹೇಗಿತ್ತು ಎಂಬ ಕುತೂಹಲವಿದ್ದರೆ ಅಲ್ಲಿನ ವರ್ಣನೆಯನ್ನೊಮ್ಮೆ ಓದಲೇಬೇಕು.

ಅದು ವಿಪ್ರೊ ಆವರಣದ ಕುವೆಂಪು ರಂಗಮಂಚ. ಸಿಂಪಲ್ ವೇದಿಕೆ ಮೇಲೆ ಹಾಗು ಮುಂದೆ ಕನ್ನಡ ಬಾವುಟಗಳದ್ದೇ ಕಾರುಬಾರು. ಇಡೀ 'Amphi theater' ಅನ್ನು ಒಂದು ನವ ವಧುವಿನಂತೆ ಸಿಂಗರಿಸಲಾಗಿದ್ದು, ಒಂದು ಗಂಧರ್ವ ಲೋಕವಾಗಿ ಮಾರ್ಪಟ್ಟಿತ್ತು. ಕಣ್ಣು   ಹಾಯಿಸಿದ   ಕಡೆಯೆಲ್ಲಾ   ವಿಪ್ರೊ  ಕನ್ನಡಿಗರ  ಗುಂಪು. ಇದರೊಂದಿಗೆ  ಸೇರಿದ್ದ  ಸಾವಿರಾರು ಅನ್ಯಭಾಶಿಕರಲ್ಲೂ  ಕನ್ನಡ  ಪ್ರೇಮವಿತ್ತು  ಎಂಬುದಕ್ಕೆ ಅವರ ಕೊರಳಲ್ಲಿದ್ದ ಕೆಂಪು ಹಳದಿ ಬಣ್ಣದ ವಸ್ತ್ರವೇ ಸಾಕ್ಷಿ.

ಆಗಷ್ಟೇ ಕೆಂಪು ಸೂರ್ಯ ತಣ್ಣಗಾಗುತ್ತಿದ್ದ. ಇತ್ತ ತಿಳಿ ತಂಗಾಳಿ ತೀಡುತ್ತಿತ್ತು. ಅತ್ತ amphi theater ಶಿಳ್ಳೆ, ಕೇಕೆ ಹಾಗು ಚಪ್ಪಾಳೆಗಳಿಂದ ಕಳೆಗಟ್ಟಿತ್ತು . ಎತ್ತ ನೋಡಿದರೂ ಕಿಕ್ಕಿರಿದು ತುಂಬಿದ್ದ ಜನಸ್ತೋಮ …. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಸಂದೇಶ ಹೊತ್ತಿದ್ದ ವಿಸ್ಮಯ ಟಿ-ಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಕಹಳೆ ತಂದಿದ್ದ ವಿಪ್ರೊ ಕನ್ನಡಿಗರು ….

ನಿಜಕ್ಕೂ ಅದೊಂದು ಅಪ್ಪಟ ಕನ್ನಡ ಹಬ್ಬ. ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು. ಇಂಥದ್ದೊಂದು ಕಲರ್ಫುಲ್ ಕನ್ನಡ ಕಾರ್ಯಕ್ರಮ ನಡೆಸಲು ಕೇವಲ ವಿಪ್ರೊ ಕನ್ನಡಿಗರಿಂದ ಮಾತ್ರ ಸಾಧ್ಯ ಎಂಬುದು ಅಲ್ಲಿ ಸಾಬೀತಾಯಿತು.


ಸಂಸ್ಥೆಯ ಹಿರಿಯರಾದ ಸಿ.ಪಿ . ಗಂಗಾಧರಯ್ಯ , ವಿ . ಆರ್ . ವೆಂಕಟೇಶ್ ಅವರೊಂದಿಗೆ ಈ ಬಾರಿ ವಿಸ್ಮಯ ವೇದಿಕೆಯನ್ನು ಹಂಚಿಕೊಳ್ಳಲು ಆಗಮಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಂದು ಮುಖ್ಯ ಅತಿಥಿ. ಅಂದು ಸೇರಿದ್ದ ಜನಸ್ತೋಮ ಕಂಡ ಗಂಗಾಧರಯ್ಯ ಫುಲ್ ಖುಷ್. Amphi theaterನಲ್ಲಿ ಒಂದೇ ಬಾರಿಗೆ ಅಷ್ಟೊಂದು ಕನ್ನಡಿಗರನ್ನು ಕಂಡ ವೆಂಕಟೇಶ್ ಅವರಂತೂ ಇನ್ನೂ ಖುಷ್. ಈ ವೇಳೆ ಪತ್ರಕರ್ತ ರವಿ ಬೆಳಗೆರೆ ಅವರ ಮಾತಿಗೊಂದಿಷ್ಟು ಎಲ್ಲರೂ ಕಿವಿಯಾದರು. ಅವರು ಹರಿಬಿಟ್ಟ ಪುನ್ಚಿಂಗ್ ಡೈಲಾಗ್ ಗಳಿಗೆ ನೆರೆದಿದ್ದವರೆಲ್ಲಾ ಜೋಶ್ ನಲ್ಲೆ ಚಪ್ಪಾಳೆ ತಟ್ಟಿದರು…

ಖುಷಿಯ ಅಲೆಯಲ್ಲಿ ತೇಲುತ್ತಿದ್ದ ವಿಪ್ರೊ ಕನ್ನಡಿಗರಿಗೆ ಅಚ್ಚರಿಯೊಂದು ಕಾದಿತ್ತು. ವಿಸ್ಮಯ ವೇದಿಕೆ ಮೇಲೆ ಒಮ್ಮೆಲೇ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಎಲ್ಲರ ಕಡೆಯೂ ಕೈ ಬೀಸಿದರು. ಸುದೀಪ್ ಕಾಣಿಸಿಕೊಂಡಿದ್ದೆ ತಡ, ಸಾವಿರಾರು ಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಆ ಕ್ಷಣ ಶಿಳ್ಳೆ, ಕೇಕೆಗಳ ಅಬ್ಬರ ಮುಗಿಲು ಮುಟ್ಟಿತ್ತು

ರಘು ದೀಕ್ಷಿತ್ ಮತ್ತು ಸುದೀಪ್ ಅಂದಿನ ವಿಸ್ಮಯದ highlight. ಜಸ್ಟ್ ಮಾತಿಗಿಳಿದ ಸುದೀಪ್ ವಿಪ್ರೊ ಕುರಿತು ಮೆಚ್ಚುಗೆಪಟ್ಟರು. ವಿಸ್ಮಯದ ಕುರಿತು ಹಾಡಿ ಹೊಗಳಿದರು. ಅದೂ ಸಾಲದೆಂಬಂತೆ ವೇದಿಕೆ ಮೇಲೆ ರಘು ದೀಕ್ಷಿತ್ ಜತೆ ಹಾಡುವ ಮೂಲಕ ರಂಜಿಸಿ ಹಾಗೆಯೇ ಮರೆಯಾದರು. ಮೈಸೂರ್ ಆನಂದ್ ರವರ ವಿಚಿತ್ರ ಹಾವ ಭಾವದಿಂದ ಕೂಡಿದ ನಗೆ ಹನಿಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು.

ಇದೆಲ್ಲದರ ನಡುವೆ ಜೂನಿಯರ್ ವಿಷ್ಣುವರ್ಧನ್ - ವಿಸ್ಮಯಕ್ಕಾಗೆ ಕನ್ನಡದ ಮೇರು ನಟ ವಿಷ್ಣುವರ್ಧನ್ ಮತ್ತೆ ಧರೆಗಿಳಿದು ಬಂದಂತಿತ್ತು. ಹಾಡು, ಹಾಸ್ಯ ಮತ್ತು ನೃತ್ಯದಿಂದ ತುಂಬಿದ ಈ ಕಾರ್ಯಕ್ರಮವನ್ನು 5000ಕ್ಕು ಹೆಚ್ಚು ಜನ ನೋಡಿ ಆನಂದಿಸಿದರು. ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು. IT ಹುಡುಗರಲ್ಲೂ ಸಾಹಿತ್ಯದ ಅಭಿರುಚಿ ಇದೆ ಅನ್ನೋದನ್ನ ತೋರಿಸಿಕೊಟ್ಟದ್ದು ಮಲ್ಲಿಗೆ ಎಂಬ ಕನ್ನಡದ ಆಡಿಯೋ ಆಲ್ಬಮ್.

ವಿಪ್ರೋದ ಶ್ರೀಕಾಂತ್ ಚೂಡಾನಾಥ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಮಲ್ಲಿಗೆ ಆಲ್ಬಮ್ ಅಂದು ಕಿಚ್ಚ ಸುದೀಪ್ ಕೈಯಿಂದ ಬಿಡುಗಡೆಯಾಗಿದ್ದು ಮತ್ತೊಂದು ಸ್ಪೆಷಲ್. 

ಒಟ್ಟಿನಲ್ಲಿ ಬೇರೆ ಬೇರೆ ಕಂಪನಿಗಳಲ್ಲಿರುವ ಕನ್ನಡದ ಅಣ್ಣ-ತಮ್ಮಂದಿರಲ್ಲೂ ತಮ್ಮ ತಮ್ಮ ಸಂಸ್ಥೆಗಳಲ್ಲಿ ಕನ್ನಡ ನಾಡಹಬ್ಬ ಮಾಡಬೇಕೆಂಬ ಉತ್ಸಾಹ ತುಂಬುವುದರಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು.