Tuesday, December 14, 2010

ನೋಕಿಯಾ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ - ೨೦೧೦

ನೋಕಿಯಾ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಬಗ್ಗೆ ನನ್ನ ಈ ಚಿಕ್ಕ ಲೇಖನವನ್ನು ನಿಮಗೆ ಸಮರ್ಪಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಸಹೋದ್ಯೋಗಿಗಳ ಸಹಯೋಗ ಹಾಗೂ ಅನುದಾನದಿ೦ದ ನಾವು ನೋಕಿಯಾದಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊ೦ಡೆವು. " ನಮ್ಮ ನಾಡು, ನಮ್ಮ ಹೆಮ್ಮೆ " ಎನ್ನುವ ಅಭಿಮಾನವನ್ನು ಎಲ್ಲರೂ ತು೦ಬು ಹೃದಯದಿಂದ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಎಲ್ಲರೂ ದೇಣಿಗೆ ಕೊಟ್ಟು ಸಹಕರಿಸಿ, ಪುರಸ್ಕರಿಸಿ, ತಮ್ಮ ಅಭಿಮಾನವನ್ನು ಮೆರೆದರು. ನಾವು ಹಮ್ಮಿಕೊ೦ಡ ಕೆಲವು ಕಾರ್ಯಕ್ರಮಗಳ ವಿವರ ಹ೦ಚಿಕೊಳ್ಳುತ್ತಿದ್ದೇನೆ.









೧೨/೧೧/೨೦೧೦ :ಕನ್ನಡ ರಾಜ್ಯೋತ್ಸವದ ಉದ್ಘಾಟನೆ ಸಮಾರಂಭ -
ಕನ್ನಡ ರಾಜ್ಯೋತ್ಸವದ ಉದ್ಘಾಟನೆ ಸಮಾರಂಭವನ್ನು ಮು೦ಜಾನೆ ೧೦.೨೯ಕ್ಕೆ ಹಮ್ಮಿಕೊ೦ಡಿದ್ದೆವು . ನಮ್ಮ ಸ೦ಸ್ಥೆಯ ಹಿರಿಯರಾದ ಶ್ರೀ ಪ್ರತಾಪ್ ಸಿ೦ಹ, ಶ್ರೀ ಭಾಸ್ಕರ್, ಶ್ರೀ ಅನಿರುದ್ದ ಮಾತುರಿಯ, ಶ್ರೀ ಸ೦ಜೀವ ಪ್ರಸಾದರವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸುಷ್ಮ , ಸರಿತ, ಅನುಪಮ, ಪದ್ಮ, ಬ್ರಿಜೇಶ್ , ಬಾಲಾಜಿ, ಕುಮಾರ್ ,ಶ್ರೀವತ್ಸ ಮತ್ತು ಸ೦ಗಡಿಗರು ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆ ಹಾಗು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು. ಅನ೦ತರ ಅರವಿ೦ದ ತಣ್ಣೀರುಬಾವಿ ಅವರು ರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣವನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸ೦ಧ್ಯಾ, ರ೦ಜಿನಿ ಮತ್ತು ಸ೦ಗಡಿಗರು ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ತ೦ದರು. ನ೦ತರ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ, ಸಮಸ್ತ ನೋಕಿಯಾ ಸ೦ಸ್ಥೆಯಲ್ಲಿ ಮೈಸೂರುಪಾಕ್ ಸಿಹಿ ಹ೦ಚಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಪದ್ಮ ಮತ್ತು ಬಾಲಾಜಿ ಯಶಸ್ವಿಯಾಗಿ ನಡೆಸಿಕೊಟ್ಟರು.








ಕನ್ನಡ ರಾಜ್ಯೋತ್ಸವದ ಅ೦ಗವಾಗಿ ಕೆಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವರ ಕೆಳಗಿನ೦ತಿದೆ.
೧೭.೧೧.೨೦೧೦ - ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
೧೮.೧೧.೨೦೧೦ - ರ೦ಗೋಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
೨೨.೧೧.೨೦೧೦ - ಕೋಲಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ..
೨೯.೧೧.೨೦೧೦ - ಕಾರ್ಯ ಸ್ಥಳದ ಅಲ೦ಕಾರ ಸ್ಪರ್ಧೆಯನ್ನು ಅಯೋಜಿಸಿದ್ದೆವು.
೩೦.೧೧.೨೦೧೦ - ಛಾಯಾಚಿತ್ರ ಸ್ಪರ್ಧೆ ಹಾಗು ಪ್ರದರ್ಶನವನ್ನು ಹಮ್ಮಿ ಕೊಳ್ಳಲಾಗಿತ್ತು. .









೩೦.೧೧.೨೦೧೦ :ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭ -
ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವು ಮಧ್ಯಾನ್ಹ ೩.೦೦ ಗ೦ಟೆಗೆ ಅರ೦ಭವಾಯಿತು. ಡೊಳ್ಳು ಕುಣಿತವನ್ನು ನಮ್ಮ ನೋಕಿಯಾ ಸಂಸ್ಥೆಯ ಕಟ್ಟದ ಮುಖ್ಯವಾಹಿನಿಗಳಲ್ಲಿ ಪ್ರದರ್ಶಿಸಲಾಯಿತು. ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಸುಷ್ಮ , ವಾಣಿ, ಚಿನ್ಮಯಿ, ಸಿ೦ಧು ಮತ್ತು ಬ್ರಿಜೇಶ್ ಹಾಡಿ ನೆರೆದ ಪ್ರೇಕ್ಷಕರನ್ನು ಮೂಕಸ್ಮಿತರನ್ನಾಗಿಸಿದರು. ನ೦ತರ ಡೊಳ್ಳು ಕುಣಿತ ಪ್ರೇಕ್ಷಕರ ಉತ್ಸಾಹವನ್ನು ಇಮ್ಮಡಿಸಿತು. ಸರಿತ ಪ್ರಸನ್ನ ಅವರು ಅಯೋಜಿಸಿದ್ದ ಕನ್ನಡ ನಾಡಿನ ಉಡುಗೆ ತೊಡುಗೆಗಳ ಸಾಂಪ್ರದಾಯಿಕ ಪ್ರದರ್ಶನದ ನಿರೂಪಣೆ ಪ್ರೇಕ್ಷಕರ ಸಿಳ್ಳೆ ಮತ್ತು ಚಪ್ಪಾಳೆಗಳಿಗೆ ಅ೦ತ್ಯವೇ ಇಲ್ಲದಂತಾಗಿಸಿತು. ಜಗದೀಶ ಅವರು ವೀರ ಕನ್ನಡಿಗ ಚಿತ್ರದ ಹಾಡಿಗೆ ತಾಳಹಾಕಿದರು. ಭವ್ಯ ಮತ್ತು ಸ೦ಗಡಿಗರು ರತ್ನ ಮ೦ಜರಿ ಚಿತ್ರದ " ಗಿಲಿ ಗಿಲಿ ಗಿಲಕ್ಕು" ಹಾಡಿನ ನೃತ್ಯಕಲೆಗೆ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತು.







ಶ೦ಕರ್, ವೇಣು ಮತ್ತು ಸ೦ಗಡಿಗರು ನಡೆಸಿಕೊಟ್ಟ ವಾದ್ಯಗಳ ಸ೦ಗೀತ ಕಛೇರಿಯು ಭೂಲೋಕದಲ್ಲಿ ಗಾ೦ಧರ್ವ ಲೋಕವನ್ನು ಸೃಷ್ಟಿ ಮಾಡಿತ್ತು. ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭಕ್ಕೆ ಅಗಮಿಸಿದ ಆತಿಥಿಗಳಾದ ಶ್ರೀ ಮಹೇಶ್ ಪಾಟೀಲ್, ಶ್ರೀ ಅನಿರುದ್ದ ಮಾತುರಿಯ ಮತ್ತು ಶ್ರೀ ಸ೦ಜೀವ ಪ್ರಸಾದರವರು ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಶ್ರೀ ಅನಿರುದ್ದ ಮಾತುರಿಯರವರು ಕಾರ್ಯಕ್ರಮದ ಬಗ್ಗೆ ಚುಟುಕು ಭಾಷಣ ನೀಡಿದರು.










ಕಾರ್ಯಕ್ರಮದ ಕೊನೆಯಲ್ಲಿ ಬ್ರಿಜೇಷ್ ಅವರ ಮಯೂರ ಚಲನಚಿತ್ರದ ಅಣ್ಣನವರ ಮಾತಿನ ಅನುಕರಣೆ, ಅನುಪಮ ರಾವ್, ಕೃಷ್ಣ ಮತ್ತು ಪವನೇಷ್ ಅವರು ರಾಕ್ ಮತ್ತು ಪಾಪ್ ಮಾದರಿಯ ಕನ್ನಡ ಹಾಡುಗಳು ಎಲ್ಲರ ಮನಸೂರೆಗೊ೦ಡವು. ಕಾರ್ಯಕ್ರಮದ ನಿರೂಪಣೆಯಲ್ಲಿ ನಿರೂಪಕರಾದ ಪದ್ಮ ಅವರು ಪ್ರೇಕ್ಷಕರ ಲವಲವಿಕೆಯನ್ನು ತಮ್ಮ ವಾಕ್ಚಾತುರ್ಯದಿ೦ದ ಮ೦ತ್ರ ಮುಗ್ದರನ್ನಾಗಿಸಿದರು.








ಕೊನೆಗೂ ಒ೦ದು ಉಲ್ಲಾಸಬರಿತ , ವರ್ಣರ೦ಜಿತ ಕಾರ್ಯಕ್ರಮ ತೆರೆಕ೦ಡಿತು. ನಾವು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದೆವು.
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Monday, December 13, 2010

ಸಿ ಜಿ ಐ ನಲ್ಲಿ ನಡೆದ ನಾಡ ಹಬ್ಬ - ೨೦೧೦

ನಾಡ ಹಬ್ಬದ ಅಂಗವಾಗಿ, ’ಸಿ ಜಿ ಐಯ್’ ನಲ್ಲಿ ಕನ್ನಡ ಘೋಷಣೆಗಳಿರುವ ಅಂಗಿಗಳನ್ನು ಮಾಡಿಸಲಾಯಿತು. "ನಮ್ಮ ನಾಡು ನಮ್ಮ ಹೆಮ್ಮೆ" ಎಂಬ ಸಾಲು ಹಾಗೂ ನಾಡ ಬಾವುಟ ಇದರ ಮೇಲೆ ಒರೆ ಹಚ್ಚಲಾಗಿತ್ತು. ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ಕನ್ನಡಿಗರು ಈ ಅಂಗಿಗಳನ್ನು ಕೊಂಡರು.
ನಾಡ ಹಬ್ಬದ ದಿನ ನಾಡ ದೇವಿ ತಾಯಿ ಭುವನೇಶ್ವರಿ ಚಿತ್ರಕ್ಕೆ ಹೂ ಮಾಲೆ ಹಾಕಿ, ವಿದೇಶದಿಂದ ಬಂದಿದ್ದವರ ಕೈಯಲ್ಲಿ ದೀಪವನ್ನು ಬೆಳಗಿಸಲಾಯಿತು. ನಂತರ ಅವರಿಗೆ ಕನ್ನಡ ಮ್ಯಾನೇಜರ್ ಒಬ್ಬರು ಕನ್ನಡದ ಹಿರಿಮೆಯನ್ನು ತಿಳಿಸಿಕೊಟ್ಟರು.
ಆ ವಿದೇಶಿಯರು ಮುಂದಿನ ವರ್ಷ ನೀವುಗಳು ಇನ್ನೂ ಜೋರಾಗಿ ಈ ಹಬ್ಬವನ್ನು ಆಚರಿಸಬೇಕು ಎಂಬ ಮಾತುಗಳನ್ನು ಹೇಳಿದ್ದು ವಿಶೇಷ. :) ಆ ವಿದೇಶಿ ಅತಿಥಿಗಳಿಗೆ ಕನ್ನಡದ ಅಂಗಿಗಳನ್ನು ನೀಡಿ, ಸತ್ಕರಿಸಲಾಯಿತು.
ನಂತರ ಎಲ್ಲರಿಗೂ ಹೋಳಿಗೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

\ ಚಿತ್ರಗಳು: \
























ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Thursday, December 9, 2010

ಹನಿವೆಲ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ - ೨೦೧೦

ಹಲವು ವರ್ಷಗಳಿಂದ 'ಹನಿವೆಲ್' ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ನವೆಂಬರ್ ೧೫ ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಮುಖ್ಯ ಕಛೇರಿಯಲ್ಲಿ ಹನಿವೆಲ್ ನ ಕನ್ನಡ ರಾಜ್ಯೋತ್ಸವ ಸಮಾರಂಭವು ನಡೆಯಿತು. ಈ ಬಾರಿಯ ಆಚರಣೆಯನ್ನು ರಂಗ ಭೂಮಿಗೆ ಸಮರ್ಪಿಸಲಾಯಿತು.

ಸಮಾರಂಭದ ದಿನದ ಹಿಂದೆಯೇ ಅಂತ್ಯಾಕ್ಷರಿ, ಕರ್ನಾಟಕದ ಸ್ಥಳಗಳ ಮೇಲೆ ನಿರೂಪಣೆ (ಪ್ರೆಜೆಂಟೇಷನ್) ಮಾಡುವುದು, ಪದಬಂದ, ರಸಪ್ರಶ್ನೆ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಸಮಾರಂಭದ ದಿನದಂದು ಪ್ರಶಸ್ತಿಗಳನ್ನು ವಿತರಿಸಲಾಯಿತು. ಬೆಂಗಳೂರಿನಲ್ಲಿರುವ ಹನಿವೆಲ್ ನ ಎಲ್ಲಾ ಕಛೇರಿಗಳಲ್ಲಿ ರಂಗೋಲಿಗಳನ್ನು ಹಾಕಲಾಗಿತ್ತು ಮತ್ತು ಎಲ್ಲ ಕಛೇರಿಗಳಲ್ಲಿ ಕನ್ನಡ ಪುಸ್ಥಕಗಳನ್ನು ವಿತರಣೆ ಮಾಡಲಾಯಿತು. ಹನಿವೆಲ್ ನ ಎಲ್ಲಾ ವಾಹನಗಳನ್ನು ಕನ್ನಡದ ಬಾವುಟಗಳಿಂದ ಸಿಂಗರಿಸಲಾಯಿತು. ನವೆಂಬರ್ ೧೫ ರಂದು ಅನೇಕರು ಕರ್ನಾಟಕದ ಸಂಸ್ಕೃತಿ ಬಿಂಬಿಸುವಂತೆ ಉಡುಪುಗಳನ್ನು ತೊಟ್ಟಿದ್ದರು.

ಸಮಾರಂಭಕ್ಕೆ ಮಾಸ್ಟರ್ ಹಿರಣ್ಣಯ್ಯನವರನ್ನು ಅಧ್ಯಕ್ಷರನ್ನಾಗಿ ಬರಮಾಡಿಕೊಳ್ಳಲಾಯಿತು. "ನಮ್ಮ ಶಾರದೆ" ಎಂಬ ಭರತನಾಟ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವು ಶುರುವಾಯಿತು. ಜನಪದ ಲೋಕದ ಡೊಳ್ಳು ಕುಣಿತ ಎಲ್ಲರನ್ನು ಎದ್ದು ಕುಣಿಯುವಂತೆ ಮಾಡಿತು. "ಶ್ರೀ ಕೃಷ್ಣ ಸಂದಾನ" ಎಂಬ ಹಾಸ್ಯ ನಾಟಕ ಜನರನ್ನು ಬಹಳ ಚೆನ್ನಾಗಿ ರಂಜಿಸಿತು. ಶಂಕರ್ ಶಾನ್ಬೋಗ್ ರ ಅಧ್ಬುತ ಸಂಗೀತದೊಂದಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವು ಮುಕ್ತಾಯಗೊಂಡಿತು.

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
ಚಿತ್ರಗಳು:




Wednesday, December 8, 2010

ಸೀಮನ್ಸ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ - ೨೦೧೦

ಸೀಮನ್ಸ್ ಕಂಪನಿಯಲ್ಲಿ ನವೆಂಬರ್ ೧೯ ರಂದು ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆಗೆ ಮುಂಚೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕನ್ನಡ ಹಾಡುಗಳನ್ನು ಹಾಡುವುದು, ಶತಪ್ರತಿಶತ ಕನ್ನಡ ಎಂಬ ಸ್ಪರ್ಧೆಯಲ್ಲಿ ೧೦೦ ಪ್ರತಿಶತ ಕನ್ನಡ ಭಾಷೆಯಲ್ಲೇ ಮಾತಾಡುವುದು, ರಂಗೋಲಿ ಸ್ಪರ್ಧೆ, ಕರ್ನಾಟಕದ ಹಳ್ಳಿಯ ಜೀವನ ಶೈಲಿ ಎಂಬ ವಿಷಯವನ್ನು ಆಧರಿಸಿ ಚಿತ್ರಕಲೆ ಸ್ಪರ್ಧೆ, ಕನ್ನಡ ಚಲನಚಿತ್ರ ನಟ ನಟಿಯರ ಚಿತ್ರದ ರೂಪರೇಖೆಯನ್ನು ಬಿಡಿಸುವುದು ಹೀಗೆ ಹತ್ತು ಹಲವು ಸ್ಪರ್ಧೆಗಳು ಆಯೋಜಿಸಿ, ನಿರ್ವಹಿಸಿ ಅರ್ಥಪೂರ್ಣವಾಗಿ ನೆರವೇರಿಸಲಾಯಿತು.

ಇನ್ನು ಆಚರಣೆಯ ದಿನದಂದು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಲವಾರು ಕನ್ನಡದ ಹಾಡುಗಳಿಗೆ ಯುವಸಹೋದ್ಯೋಗಿಗಳು ಡ್ಯಾನ್ಸ್ ಮಾಡಿದರು. ನಂತರ ಕೆಲವರು ಮ್ಯಾಡ್ ಆಡ್ಸ್ (ತಮಾಷೆ ಜಾಹೀರಾತು) ನೆರವೇರಿಸಿ ಕೊಟ್ಟು ಅಲ್ಲಿದ್ದ ಎಲ್ಲ ಸಭೀಕರನ್ನು ರಂಜಿಸಿದರು. ಅದೇ ರೀತಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ನಮ್ಮನ್ನೆಲ್ಲ ನಗೆಯ ಹೊಳೆಯಲ್ಲಿ ತೇಲಿಸಿತು. ಇತ್ತೀಚಿಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ಅವರ ಸ್ಮರಣೆಯನ್ನು "ಸಾಹಸ ಸಿಂಹನಿಗೆ ನಮನ" ಎಂಬ ನೃತ್ಯದ ಮೂಲಕ ಮಾಡಲಾಯಿತು.
ಈ ವಿಧದಲ್ಲಿ ೨೦೧೦ ರ ಕನ್ನಡ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲಾಯಿತು. ಹೊಸ ಅನುಭವವನ್ನು, ರಾಜ್ಯೋತ್ಸವದ ಸುಮಧುರ ಕ್ಷಣಗಳನ್ನು ನೆನೆಯುತ್ತ, ಮುಂದಿನ ವರ್ಷದ ರಾಜ್ಯೋತ್ಸವದ ಆಚರಣೆ ಬಗ್ಗೆ ವಿಚಾರ ಮಾಡುತ್ತ ಮನೆ ಕಡೆ ಹೆಜ್ಜೆ ಹಾಕಿದೆವು.

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಚಿತ್ರಗಳು:











Saturday, December 4, 2010

ಟಿ.ಸಿ.ಎಸ್. ನಲ್ಲಿ ಕನ್ನಡ ರಾಜ್ಯೋತ್ಸವ - ೨೦೧೦

ಮೊನ್ನೆ ಅಂದರೆ ನವೆಂಬರ್ ೧೨ ರಂದು ಟಿ ಸಿ ಎಸ್ ನಲ್ಲಿ (ಧಾರಾ ಕಟ್ಟಡ) ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಬಹಳ ಸೋಗಸಾಗಿ, ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು ಹಾಗೂ ನಾಡಹಬ್ಬದ ಆಚರಣೆಯ ಸಂದರ್ಭದಲ್ಲಿ ನಮ್ಮ ಕಂಪನಿಯ ಕೆಲ "ಕಲಾಪ್ರತಿಭಾನ್ವಿತ" ಸಹೋದ್ಯೋಗಿಗಳು ಅತ್ಯಂತ ಆಸಕ್ತಿಯಿಂದ, ಅಭಿಮಾನದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾರಂಭಕ್ಕೆ ಆಗಮಿಸಿದವರೆಲ್ಲರ ಹೃಮನಗಳನ್ನು ತಣ್ಣಿಸುವ ಹಾಗೆ ನಡೆಸಿಕೊಟ್ಟರು. ಸಮಾರಂಭಕ್ಕೆ ನಮ್ಮೆಲ್ಲರ ನೆಚ್ಚಿನ ಮಾಸ್ಟರ್ ಹಿರಣ್ಣಯ್ಯನವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಸಂಜೆ ೪.೩೦ ರ ವೇಳೆಗೆ ಸರಿಯಾಗಿ ದೀಪ ಬೆಳಗಿಸುವ ಮೂಲಕ ಹಿರಣ್ಣಯ್ಯನವರು ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ನಾಡಗೀತೆ ಹಾಗು ಹಚ್ಚೇವು ಕನ್ನಡದ ದೀಪ ಕವನದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕಾರ್ಯಕ್ರಮ ಶುರುವಾಯಿತು.

ಅನಂತರದಲ್ಲಿ ಮೂಡಿಬಂದ ಹಿರಣ್ಣ ಯ್ಯನವರ ಕನ್ನಡ ಹಾಗೂ ಇಂಗ್ಲೀಶ್ ಭಾಷೆಗಳ ಮಿಶ್ರಿತ ಮಿಂಚಿನ ವಾಗ್ಜರಿ ನೆರವೇರಿದವರಲ್ಲಿ ತಮ್ತಮ್ಮ ಮಾತೃಭಾಷಾಭಿಮಾನದ ಕಿಚ್ಚನ್ನು ಹೊತ್ತಿಸುವಂತೆ ಇತ್ತು.ಕನ್ನಡದಷ್ಟೇ ಇಂಗ್ಲೀಶ್ ಭಾಷೆಯ ಮೇಲೂ ಅವರಿಗಿದ್ದ ಭಾಷಾ ಬಿಗಿಹಿಡಿತ ಹಾಗೂ ಮಾತಿನ ಚತುರತೆಯನ್ನು ಕಂಡು ಕನ್ನಡಿಗ ಸಹೋದ್ಯೋಗಿಗಳೇಕೆ ಪರ ಭಾಷಾ ಸಹೋದ್ಯೋಗಿಗಳು ಸಹ ಅಂದು ಬೆರಗಾಗಿ ಹೋಗಿದ್ದರು. ಎಪ್ಪತ್ತೇಳರ ಇಳಿವಯಸ್ಸಿನಲ್ಲೂ ಇಪ್ಪತ್ತೇಳರ ಯುವಕನಂತೆ ಪ್ರಬುದ್ದವಾದ ಹಾಗು ಹಾಸ್ಯ ತುಂಬಿದ ಮಾತಿನ ಜೋರುಮಳೆಯನ್ನೇ ಸುರಿಸಿದರು.ಅಲ್ಲದೆ ಕನ್ನಡ ಭಾಷೆಗೆ ಮಾಸ್ತಿ, ಗುಂಡಪ್ಪನವರು, ಕೈಲಾಸಂ, ನಾ ಕಸ್ತೂರಿ ಮುಂತಾದ ಪರ ಮಾತೃಭಾಷ ಕವಿಗಳ ಅಪರಿಮಿತ ಕೊಡುಗೆಯನ್ನು ಸ್ಮರಿಸಿದರು.

ಹಿರಣ್ಣಯ್ಯನವರ ಮಾತಿನ ಪ್ರವಾಹ ನಿಲ್ಲುತ್ತಿದ್ದಂತೆಯೇ, ಹಿರಿಯ ಸಹೋದ್ಯೋಗಿಗಳು ಆಯೋಜಿಸಿದ್ದ "ಥಟ್ ಅಂತ ಹೇಳಿ" ಕನ್ನಡ ನಾಡಿಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳುವ ಮೂಲಕ ಒಂದರ್ಥದಲ್ಲಿ ವೀಕ್ಷಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿತು.

ರಸಪ್ರಶ್ನೆ ಕಾರ್ಯಕ್ರಮವೂ ಮುಗಿಯುತ್ತಿದ್ದಂತೆಯೇ ಯುವಸಹೋದ್ಯೋಗಿಗಳಿಂದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಇತ್ತು. ಅನಿಸುತಿದೆ ಯಾಕೋ ಇಂದು, ನೀ ಸನಿಹಕೆ ಬಂದರೆ.., ನೀ ಅಮೃತಧಾರೆ, ಗಿಲ್ ಗಿಲ್ ಗಿಲಕ್ಕ್ ಕಾಲ್ಗೆಜ್ಜೆ ಝಣಕ್ಕ್.., ಈ ಗೀತೆಗಳನ್ನು ಹಾಡಿದರು. ಅನಿಸುತಿದೆ ಯಾಕೋ ಇಂದು ಹಾಡಿಗೆ ಪ್ರಥಮ ಬಹುಮಾನ ಬಂತು.

ಗಾಯನ ಸ್ಪರ್ಧೆ ಮುಗಿದ ಬಳಿಕ ಹೆಚ್ ಕೆ ರಘು ಎಂಬುವ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ, ಅವರು ಮಧುರವಾಗಿ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ (ಅದರಲ್ಲೂ ಹೆಚ್ಚಾಗಿ ಕನ್ನಡ ನಾಡು, ನುಡಿ ಹಾಗು ಸಂಸ್ಕೃತಿಗೆ ಸಂಬಂಧಿಸಿದ ಗೀತೆಗಳನ್ನು) ಕೆಲಕಾಲ ನಮ್ಮನ್ನು ನಾಡು, ನುಡಿ ವಿಷಯದಲ್ಲಿ ಭಾವಪರವಶರನ್ನಾಗಿ ಮಾಡಿಬಿಟ್ಟಿದ್ದರು.

ಸಮಾರಂಭದ ಮಧ್ಯಾವಧಿಯಲ್ಲಿ ಸಭಾಂಗಣ ವೀಕ್ಷಕರಿಂದ ತುಂಬಿಹೋಗಿತ್ತು, ನಮ್ಮ ಕಂಪನಿಯಲ್ಲಿ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಮತ್ತು ಯಶಸ್ಸು ವೀಕ್ಷಕರ ಹಾಜರಾತಿಯ ಮೂಲಕ ತೋರ್ಪಡಿಸುತ್ತಿತ್ತು.

ಅಲ್ಲದೆ ರಿಚರ್ಡ್ ಲೂಯಿಸ್ ಹಾಗು ಎಂ. ಎಸ್ ನರಸಿಂಹಮೂರ್ತಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಹಾಸ್ಯದ ಮಾತುಗಳ ಮೂಲಕ ನಮ್ಮನ್ನೆಲ್ಲ ನಗೆಯ ಹೊಳೆಯಲ್ಲಿ ತೇಲಿಸಿದರು. ಒಂದು ಹಂತದಲ್ಲಿ ರಿಚರ್ಡ್ ಲೂಯಿಸ್ ರ ಹಾಸ್ಯದ ಮಾತುಗಳ ಮೂಡಿಗೆ ಸಿಕ್ಕು ಸಮಯವಾದುದ್ದೆ ಅರಿವಿಗೆ ಬರಲಿಲ್ಲ

ನಂತರದಲ್ಲಿ ಶಿವ ಅಂತ ಹೋಗುತ್ತಿದೆ ರೋಡಿನಲ್ಲಿ.. (ಜಾಕಿ) , ಅರೆರೆರೆ ಗಿಣಿರಾಮ.. (ಗಂಧದಗುಡಿ), ಇನ್ನೂ ಹಲವಾರು ಕನ್ನಡದ ಹಾಡುಗಳಿಗೆ ಯುವಸಹೋದ್ಯೋಗಿಗಳು ಡ್ಯಾನ್ಸ್ ಮಾಡಿದರು ಹಾಗು ಕನ್ನಡ ನಾಡು, ನುಡಿ ಕುರಿತಾದ ಗೀತೆಗೆ ಕೆಲ ಸಹೃದಯಿ ಸಹೋದ್ಯೋಗಿಗಳು ಸಮೂಹ ಡ್ಯಾನ್ಸು ಮಾಡಿದರು . ಇನ್ನೂ ಕೆಲ ಸಹೋದ್ಯೋಗಿಗಳು ತುಂಬಾ ಹಾಸ್ಯಭರಿತವಾದ ಸ್ಕಿಟ್ (ರಜನಿ ಇನ್ ಇನ್ಸೈಡ್) ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನೆಲ್ಲ ಬೆರಗಾಗಿ ಮಾಡಿದ್ದು ಒರಿಸ್ಸಾದ ಯುವಸಹೋದ್ಯೋಗಿಯು ಶಿವ ಅಂತಾ ಹೋಗುತ್ತಿದ್ದೆ ರೋಡಿನಲ್ಲಿ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದು ಹಾಗೂ ಮತ್ತೋರ್ವ ಒರಿಸ್ಸಾದ ಯುವಸಹೋದ್ಯೋಗಿಯು ಹಾಡು ಸಂತೋಷಕ್ಕೆ (ಶಂಕರ್ ನಾಗ್ ಅವರ ಗೀತಾ ಚಿತ್ರದ ಹಾಡು) ಹಾಡಿಗೆ ಡ್ಯಾನ್ಸು ಮಾಡಿದ್ದು.

ಕಾರ್ಯಕ್ರಮದಲ್ಲಿ ಕೊನೆಯಲ್ಲಿ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ ಹೆಚ್ ಕೆ ರಘು ಅವರು ಭಾವಪೂರ್ಣವಾಗಿ ಹಾಡಿದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ..ಮತದಲ್ಲಿ ಮೇಲ್ಯಾವುದೋ ಗೀತೆಯೊಂದಿಗೆ ನಮ್ಮ ಕಂಪನಿಯ ಈ ಸಲದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು. ಮುಂದಿನ ವರುಷ ನಮ್ಮ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಹಾಗು ವೈಭವದಿಂದ ಆಚರಣೆ ಮಾಡಬೇಕೆಂದು ಯೋಜನೆಯಲ್ಲಿ ಮನೆಕಡೆ ಹೆಜ್ಜೆ ಹಾಕಿದೆವು..


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 1, 2010

ಮೈಂಡ್ ಟೆಕ್ 5ನೇ ಕನ್ನಡ ರಾಜ್ಯೋತ್ಸವ - 2010

ಮೈಂಡ್ ಟೆಕ್ ನಲ್ಲಿ ಪ್ರತಿ ವರ್ಷವೂ ಆಚರಿಸುವಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 19 ರಂದು ಆಚರಿಸಲಾಯಿತು. ಇದು 5 ನೇ ವರ್ಷದ ಆಚರಣೆ ಎಂದು ಹೇಳಲು ಹೆಮ್ಮೆ.

ಕಾರ್ಯಕ್ರಮವು ಕೆಳಕಂಡಂತೆ ನಡೆಯಿತು.

1. ಬೆಳಿಗ್ಗೆ 11:30 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು. ಹಿಂದಿನ ದಿನವೇ ಬಣ್ಣದ ರಂಗೋಲಿಯನ್ನು ಹಾಕಿದ್ದೆವು. ಕರ್ನಾಟಕದ ಭೂಪಟದ ಅಲಂಕಾರ ಬೆಳಿಗ್ಗೆ 9ರೊಳಗೆ ಮುಗಿಯಿತು.

2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು.

3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು.

4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್ನು ಮಧುಕರ್ವರು ವಹಿಸಿಕೊಂಡು ಚೆನ್ನಾಗಿ ನಡೆಸಿಕೊಟ್ಟರು. ನಿರೂಪಣೆ ಪೂರ್ತಿ ಕನ್ನಡದಲ್ಲೇ ಇದ್ದಿದ್ದು ವಿಶೇಷ.

5. ನಂತರ ನಾಡಗೀತೆ - ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಹಾಡಲಾಯಿತು. ಇದನ್ನು ಹಾಡಲು ಒಂದು ತಂಡ, ಒಂದು ವಾರದಿಂದ ಅಭ್ಯಾಸ ಮಾಡಿತ್ತು. ಚೆನ್ನಾಗಿ ಹಾಡಿದರು.

6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ಮಧುಕರ್ ಮಾತನಾಡಿದರು.

7. ಗಣ್ಯರು ಕೂಡ ಕನ್ನಡ ಹಾಗು ಕರ್ನಾಟಕದ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.

8. ಸಂದೀಪ್ ವರು "ಗೀಯ ಪದ" ಹಾಡನ್ನು ಹಾಡಿದರು. ಗೀಯ ಸಾಲುಗಳನ್ನು ನೆರೆದಿದಿದ್ದ ಸಭೀಕರೆಲ್ಲ ಜೊತೇಲಿ ಹೇಳಿದರು.

9. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ ಹಂಚುವುದರ ಮೂಲಕ ಅದರ ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ವರ್ಷ "ಕಜ್ಜಾಯ" ಹಾಗು "ಮದ್ಧೂರು ವಡೆ" ಹಂಚಿದೆವು.

10. ಎಲ್ಲಾ ಉದ್ಯೋಗಿಗಳಿಗೂ ಕನ್ನಡದ ಕಾಲೇನ್ಡರ್ ಕೊಡಲಾಯಿತು. ಕಾಲೇನ್ಡರ್ನಲ್ಲಿ ಅವರ ಹೆಸರನ್ನು ಕನ್ನಡದಲ್ಲಿಯೇ ಬರೆಯಲಾಗಿತ್ತು. ಎಲ್ಲರು ಇದನ್ನು ನೋಡಿ ಆಶ್ಚರ್ಯ ಹಾಗು ಸಂತೋಷ ವ್ಯಕ್ತ ಪಡಿಸಿದರು.
11. ಸಂಜೆ ಕನ್ನಡ ರಸಪ್ರಶ್ನೆ , ಪರಭಾಷಿಕರಿಗೆ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಹಾಡು ಹಾಗು ಕರ್ನಾಟಕದ ಉಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಎಲ್ಲರು ಭಾಗವಹಿಸಿದರು. ಗೆದ್ದವರಿಗೆ ಚನ್ನಪಟ್ಟಣದ ಕೀ-ಚೈನ್ ಕೊಡಲಾಯಿತು. ಮತ್ತೆ ಪರಭಾಷಿಕರಿಗೆ ಕನ್ನಡ ಕಲಿಯುವ ಪುಸ್ತಕ ಕೊಡಲಾಯಿತು.

ಚಿತ್ರಗಳು:

Monday, November 29, 2010

ಸ್ಯಾಪ್ ಲ್ಯಾಬ್ಸ್ ಅಲ್ಲಿ ಕನ್ನಡ ನಾಡಹಬ್ಬ 2010




ಅಕ್ಟೋಬರ್ ೨೮ರಂದು ಸ್ಯಾಪ್ ಲ್ಯಾಬ್ಸ್ ಕಛೇರಿಯಲ್ಲಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಬೆಳಗ್ಗೆ ೮:೩೦ ರ ಸುಮಾರಿಗೆ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ರವರು ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಈ ವರ್ಷದ ರಾಜ್ಯೋತ್ಸವದ ಸಂಭ್ರಮ ಶುರುವಾಯಿತು. ಧ್ವಜಾರೋಹಣದ ಸಂದರ್ಭದಲ್ಲಿ ನಾಡಗೀತೆಯಾದ "ಜೈ ಭಾರತ ಜನನಿಯ ತನುಜಾತೆ"ಯನ್ನು ನಾವೆಲ್ಲರೂ ಹಾಡಿದೆವು.

ತದನಂತರ ಅಲ್ಲಿ ನೆರೆದಿದ್ದಂತಹ ಎಲ್ಲಾ ಕನ್ನಡ ಪ್ರೇಮಿಗಳಿಗೆ ಸಿಹಿಯನ್ನು ಹಂಚಿದ್ದಾಯಿತು.ನಂತರ ಶುರುವಾಯಿತು ನೋಡಿ, ಮಧ್ಯಾಹ್ನದ ಸಂಭ್ರಮಕ್ಕೆ ಕಛೇರಿಯ ಒಳಾಂಗಣ ಕೆಫ಼ೆಟೇರಿಯವನ್ನು ಶೃಂಗರಿಸುವ ಸಂಭ್ರಮ. ಅಲ್ಲೇ ಇದ್ದ ಪುಟ್ಟ ವೇದಿಕೆಯನ್ನು ಹೂವಿನಿಂದ ಸಿಂಗರಿಸಿದ್ದಾಯಿತು.

ಅಷ್ಟರಲ್ಲಾಗಲೆ ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರ ಆಗಮನವಾಯಿತು. ಸರಿ ಅವರಿಗೆ ಊಟ ಮಾಡಿ ತಯರಾಗಿರಲು ಹೇಳಿ, ನಮ್ಮ ಸಹೋದ್ಯೋಗಿಗಳನ್ನೇ ಕರಗವನ್ನು ಹೊತ್ತು ತರಲು ಸಿದ್ಧಮಾಡಲು ಶುರುಮಾಡಿದೆವು. ಇದರ ಜೊತೆಗೆ ವಿಡಿಯೊ ಹಾಗು ಧ್ವನಿವರ್ಧಕಗಳನ್ನು ಜೋಡಿಸುವ ಕಾರ್ಯ ನಡೆಯುತಿತ್ತು. ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ ೧ ಆಯಿತು.

ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರನ್ನು ಕಛೇರಿಯ ಒಳಗೆ ಒಂದು ಸುತ್ತು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಬಂದರು. ಡೊಳ್ಳಿನ ಸದ್ದಿಗೆ ಇಡೀ ಕಛೇರಿಯ ಜನ ರೋಮಾಂಚನಗೊಂಡರು. ಅವರು ನಿರ್ಮಿಸಿದ ಮಾನವ ಪಿರಮಿಡ್ ಮಾದರಿಯಲ್ಲಿ ಡೊಳ್ಳು ಬಾರಿಸುವುದನ್ನು ಕಂಡ ನಮ್ಮ ಪ್ಯಾಟೆ ಮಂದಿ ಆಶರ್ಯ ಚಕಿತರಾದರು. ಇನ್ನು ವೀರಭದ್ರ ಕುಣಿತವನ್ನು ಕಂಡ ಜನ ಊಟವನ್ನು ಮರೆತು ಅವರ ಕಲೆಯನ್ನು ಸವಿಯುತ್ತ ನಿಂತರು.

ವೀರಭದ್ರ ಕುಣಿತದವರ ಮುಖಭಾವವನ್ನು ವರ್ಣಿಸಲು ಪದಗಳು ಸಿಗೋದಿಲ್ಲಾ..ಅದೇನಿದ್ರು ನೋಡಿ ಸವಿಯೋದೆ ಚೆಂದ. ಇದೆಲ್ಲಾ ಆಗುತ್ತಿರಬೇಕಾದ್ರೆ.. ಅಲ್ಲಿ ಇನ್ನೊಂದು ಕಡೆ ಕರಗದ ಉತ್ಸವ ಶುರುವಾಯಿತು. ಈ ಸಲದ ರಾಜ್ಯೋತ್ಸವದ ಥೀಮ್ "ಬೆಂಗಳೂರು ದರ್ಶನ" ವಾಗಿದ್ದ ರಿಂದ, ಕರಗದ ಜೊತೆ ಕೆಂಪೇಗೌಡರ ವೇಷಧಾರಿಯೊಬ್ಬರು ಸಭಾಂಗಣದ ಒಳಗೆ ನಡೆದು ಬಂದರು. ಕರಗಕ್ಕೆ ಡೊಳ್ಳು ಕುಣಿತ ಹಾಗು ವೀರಭದ್ರ ಕುಣಿತದವರಿಂದ ಸ್ವಾಗತ ಸಿಕ್ಕಿತು.

ನಂತರ ಕರಗಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಸರಿಯಾಗಿ ೨:೪೫ ಗೆ ಶುರುಮಡಿದೆವು. ಶಿವು ಹಾಗು ಶ್ರೀಲಕ್ಷ್ಮಿ ಯವರ ಆತಿಥ್ಯದಲಿ ಕಾರ್ಯಕ್ರಮ ಗಣಪನ ಆರಾಧನೆಯೊಂದಿಗೆ ಶುರುವಾಯಿತು. ಈ ಸಲ ಗಣಪನ ಪೂಜೆ ನೃತ್ಯರೂಪದಲ್ಲಿ ಪ್ರಸ್ತುತ ಪಡಿಸಿದ್ದು ನಮ್ಮವರೇ ಆದ ಸಿಂಧುರವರು.

ಅಷ್ಟರಲ್ಲಿ ನಮ್ಮ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಯೋಗರಾಜ ಭಟ್ ಅವರು ಆಗಮಿಸಿದರು. ಭಾರಿ ಚಪ್ಪಾಳೆಯೊಂದಿಗೆ ಅವರನ್ನು ಸಭೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಅವರ ಜೊತೆ ನಮ್ಮವರೆ ಆದ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ಮತ್ತು ಶ್ರೀ ಭುವನೇಶ್ವರ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಶ್ರಿನಿ ಮತ್ತು ತಂಡದವರು "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದರು.

ಈ ವರ್ಷ ಗತಿಸಿದ ಕರ್ನಾಟಕದ ಮೇರು ವ್ಯಕ್ತಿಗಳಿಗೆ ಹಾಡಿನ ಮೂಲಕ ಶ್ರಧ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ ಶ್ರೀ. ಯೋಗರಾಜ್ ಭಟ್ ಅವರು ಈ ಟೆಕ್ಕಿ ಯುಗದಲ್ಲಿ ಸಂಬಂಧಗಳ ಕುರಿತು ಮಾತನ್ನಾಡಿದರು. ತಮಾಷೆಯಾಗೆ ಇದ್ದ ಅವರ ಮಾತುಗಳು, ಮುಗಿಯುವ ಅಂತಕ್ಕೆ ಬಂದಾಗ ನಮ್ಮಲ್ಲಿ ಗಂಭೀರವಾದ ಆಲೋಚನೆಯನ್ನುಂಟು ಮಾಡಿತು.

ಸಭಿಕರ "ಒಂದು ಹಾಡು" ಎಂಬ ಒತ್ತಾಯಕ್ಕೆ ಮಣಿಯದ ಅವರು ತಮ್ಮ ಪಂಚರಂಗಿ ಸಿನಿಮಾದ "ಗಳು" ಡೈಲಾಗ್ ಅನ್ನು ನಮ್ಮ ಸಾಫ್ಟವೇರ್ ಉದ್ಯಮಕ್ಕೆ ಸರಿಯಾಗಿ ಬದಲಾಯಿಸಿ ಹೇಳಿ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಕನ್ನಡ ಚಲನಚಿತ್ರಗಳ ಕೆಲವು ಗೀತೆಗಳನ್ನು ಹಾಡಲಾಯಿತು. ಹರ್ಷ ಮತ್ತು ತಂಡದವರಿಂದ "ಬೆಂಗಳೂರು ೨೨೫೦" ಎಂಬ ನಾಟಕ ನೆರದಿದ್ದ ಸಭಿಕರಿಗೆ ಮನೋರಂಜನೆ ಜೊತೆಗೆ ಕನ್ನಡಿಗರ ಕರ್ತವ್ಯವನ್ನು ನೆನಪಿಸಿತು.

ನಂತರ ವಿಠ್ಠಲ್ ಮತ್ತು ತಂಡದವರಿಂದ "ತಗಡಾನಿಕ್" ಎಂಬ ಟೈಟಾನಿಕ್ ಚಲನಚಿತ್ರದ ಸ್ಪೂಫ್ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತು. ನಂತರ ಕೌಶಿಕ್ ಮತ್ತು ತಂಡದವರಿಂದ "ಮಠ" ಎಂಬ ಮ್ಯಾಡ್ ಆಡ್ಸ್ ಪ್ರೇಕ್ಷಕರನ್ನು ಹುಚ್ಚೆಬಿಸಿತು."ಬೆಂಗಳೂರು ರ್ಶನ" ಫ್ಯಾಶನ್ ಷೋ ದಲ್ಲಿ ಮೊದಲಿಗೆ ಬಂದಿದ್ದು ನಾಡ ಪ್ರಭು ಕೆಂಪೇಗೌಡ.

ನಂತರ ಬೆಂಗಳೂರಿನ ದೇವಸ್ಥಾನಗಳ ಪರಿಚಯ, ಬೆಂಗಳೂರಿನ ಫುಡ್ ಸ್ಟ್ರೀಟ್ ಪರಿಚಯ, ಚಿತ್ರ ಸಂತೆ, ಕ.ರ.ವೇ, ಕಿಂಗ್ ಫಿಷರ್/ ಆರ್.ಸಿ.ಬಿ, ಬೆಂಗಳೂರಿನ ನೈಟ್ ಲೈಫ್ ಬಗ್ಗೆ ಪರಿಚಯಿಸಲಾಯಿತು.ತದನಂತರ ಚಿರಂಜೀವಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು. ಇದರೊಂದಿಗೆ ಈ ಸಲದ ರಾಜ್ಯೋತ್ಸವದ ಕಾರ್ಯಕ್ರಮ ಮುಕ್ತಾಯವಾಯಿತು.

Monday, March 1, 2010

ವಿಪ್ರೋದಲ್ಲಿ ಕನ್ನಡ ನಾಡಹಬ್ಬ 2009

ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮುರುವುದು…..
ಎಂಬ ಕವಿವಾಣಿಯಂತೆ ನಿಜವಾದ ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡ ಎಂಬ ಪದ ಕಿವಿಗೆ ಬಿದ್ದೊಡನೆಯೇ ರೋಮಂಚನವಾಗುವುದು.

ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು….
ಎಂಬುದು ಕವಿಯ ಕಂಪುನುಡಿ


ಅದರಂತೆಯೇ ವಿಪ್ರೊ ಸಂಸ್ಥೆಯಲ್ಲಿ ಕನ್ನಡದ ಕಂಪು ಪಸರಿಸುವ  ಕಾರ್ಯ ಕೆಚ್ಚಿನ ಕನ್ನಡಿಗರಿಂದಾಗುತ್ತಿದೆ. ವಿಪ್ರೋದಲ್ಲಿ ಸದ್ದಿಲ್ಲದೇ ವರ್ಷಕ್ಕೊಮ್ಮೆ ವಿಸ್ಮಯ ಎಂಬ ಹೆಸರ ಮೂಲಕ ಕನ್ನಡ ಜಾತ್ರೆ ನಡೆಯುತ್ತಿದೆ, ಕನ್ನಡ ಬಾವುಟಗಳು ಹಾರಾಡುತ್ತವೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಿಂಚನವಾಗುತ್ತದೆ.  ಕಳೆದ ನಾಲ್ಕು ವರ್ಷಗಳಿಂದಲೂ ಸದ್ದಿಲ್ಲದೇ ಮತ್ತು ಸುದ್ದಿಯಾಗದ ಕನ್ನಡ ರಥ ವಿಪ್ರೋದಲ್ಲಿ ವಿಜ್ರಂಭಿಸುತ್ತ ಬಂದಿದೆ.

ಈ ಕನ್ನಡ ರಥದ ಸೂತ್ರಧಾರಿ ನರಸಿಂಗ ರಾವ್. ಇನ್ನು ಇವರಿಗೆ ವಿಸ್ಮಯದ ರೂವಾರಿಯಾಗಿ ರಾಘವೇಂದ್ರ ಕಮಲಾಕರ್ ಸಾಥ್ ನೀಡಿದ್ದಾರೆ . ಇವರಿಬ್ಬರಿಗೂ ಜೈ ಅನ್ನುತ್ತಲೇ ಕನ್ನಡ ಭಾಷಾಭಿಮಾನವನ್ನು ಎತ್ತಿ ತೋರಿಸಲು ಸಮಾನ ಮನಸ್ಸಿನ ಗೆಳೆಯರಿದ್ದಾರೆ. 

  
ಫೆಬ್ರವರಿ 11 ರಂದು ನಡೆದ ವಿಸ್ಮಯ ಕಾರ್ಯಕ್ರಮವು ಆಪ್ತರ, ಸಮಾನಮನಸ್ಕರ, ಅಪ್ಪಟ ಕನ್ನಡಾಭಿಮಾನಿಗಳ ವೇದಿಕೆಯಾಗಿತ್ತೆನ್ನಬಹುದು. ಈ ಬಾರಿ ನಡೆದ ವಿಸ್ಮಯ ಮಾತ್ರ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದು ಸುಳ್ಳಲ್ಲ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಸಾವಿರಾರು ವಿಪ್ರೊ ಕನ್ನಡಿಗರು - ಅಷ್ಟೊಂದು ಕನ್ನಡಿಗರು ವಿಪ್ರೋದಲ್ಲಿದ್ದಾರೆಯೇ ಎಂದು ಅಚ್ಚರಿಯಾಗಬಹುದು.

ಕಳೆದ ಫೆಬ್ರವರಿ 11ರಂದು ನಡೆದ ವಿಸ್ಮಯಕ್ಕೆ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದು ವಿಶೇಷ ಮತ್ತು ವಿಸ್ಮಯ! ಹಾಗಾದರೆ, ಅಷ್ಟೊಂದು ಜನರ ಮುಂದೆ ವಿಸ್ಮಯದ ಅವತಾರವಾದರೂ ಹೇಗಿತ್ತು ಎಂಬ ಕುತೂಹಲವಿದ್ದರೆ ಅಲ್ಲಿನ ವರ್ಣನೆಯನ್ನೊಮ್ಮೆ ಓದಲೇಬೇಕು.

ಅದು ವಿಪ್ರೊ ಆವರಣದ ಕುವೆಂಪು ರಂಗಮಂಚ. ಸಿಂಪಲ್ ವೇದಿಕೆ ಮೇಲೆ ಹಾಗು ಮುಂದೆ ಕನ್ನಡ ಬಾವುಟಗಳದ್ದೇ ಕಾರುಬಾರು. ಇಡೀ 'Amphi theater' ಅನ್ನು ಒಂದು ನವ ವಧುವಿನಂತೆ ಸಿಂಗರಿಸಲಾಗಿದ್ದು, ಒಂದು ಗಂಧರ್ವ ಲೋಕವಾಗಿ ಮಾರ್ಪಟ್ಟಿತ್ತು. ಕಣ್ಣು   ಹಾಯಿಸಿದ   ಕಡೆಯೆಲ್ಲಾ   ವಿಪ್ರೊ  ಕನ್ನಡಿಗರ  ಗುಂಪು. ಇದರೊಂದಿಗೆ  ಸೇರಿದ್ದ  ಸಾವಿರಾರು ಅನ್ಯಭಾಶಿಕರಲ್ಲೂ  ಕನ್ನಡ  ಪ್ರೇಮವಿತ್ತು  ಎಂಬುದಕ್ಕೆ ಅವರ ಕೊರಳಲ್ಲಿದ್ದ ಕೆಂಪು ಹಳದಿ ಬಣ್ಣದ ವಸ್ತ್ರವೇ ಸಾಕ್ಷಿ.

ಆಗಷ್ಟೇ ಕೆಂಪು ಸೂರ್ಯ ತಣ್ಣಗಾಗುತ್ತಿದ್ದ. ಇತ್ತ ತಿಳಿ ತಂಗಾಳಿ ತೀಡುತ್ತಿತ್ತು. ಅತ್ತ amphi theater ಶಿಳ್ಳೆ, ಕೇಕೆ ಹಾಗು ಚಪ್ಪಾಳೆಗಳಿಂದ ಕಳೆಗಟ್ಟಿತ್ತು . ಎತ್ತ ನೋಡಿದರೂ ಕಿಕ್ಕಿರಿದು ತುಂಬಿದ್ದ ಜನಸ್ತೋಮ …. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಸಂದೇಶ ಹೊತ್ತಿದ್ದ ವಿಸ್ಮಯ ಟಿ-ಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಕಹಳೆ ತಂದಿದ್ದ ವಿಪ್ರೊ ಕನ್ನಡಿಗರು ….

ನಿಜಕ್ಕೂ ಅದೊಂದು ಅಪ್ಪಟ ಕನ್ನಡ ಹಬ್ಬ. ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು. ಇಂಥದ್ದೊಂದು ಕಲರ್ಫುಲ್ ಕನ್ನಡ ಕಾರ್ಯಕ್ರಮ ನಡೆಸಲು ಕೇವಲ ವಿಪ್ರೊ ಕನ್ನಡಿಗರಿಂದ ಮಾತ್ರ ಸಾಧ್ಯ ಎಂಬುದು ಅಲ್ಲಿ ಸಾಬೀತಾಯಿತು.


ಸಂಸ್ಥೆಯ ಹಿರಿಯರಾದ ಸಿ.ಪಿ . ಗಂಗಾಧರಯ್ಯ , ವಿ . ಆರ್ . ವೆಂಕಟೇಶ್ ಅವರೊಂದಿಗೆ ಈ ಬಾರಿ ವಿಸ್ಮಯ ವೇದಿಕೆಯನ್ನು ಹಂಚಿಕೊಳ್ಳಲು ಆಗಮಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಂದು ಮುಖ್ಯ ಅತಿಥಿ. ಅಂದು ಸೇರಿದ್ದ ಜನಸ್ತೋಮ ಕಂಡ ಗಂಗಾಧರಯ್ಯ ಫುಲ್ ಖುಷ್. Amphi theaterನಲ್ಲಿ ಒಂದೇ ಬಾರಿಗೆ ಅಷ್ಟೊಂದು ಕನ್ನಡಿಗರನ್ನು ಕಂಡ ವೆಂಕಟೇಶ್ ಅವರಂತೂ ಇನ್ನೂ ಖುಷ್. ಈ ವೇಳೆ ಪತ್ರಕರ್ತ ರವಿ ಬೆಳಗೆರೆ ಅವರ ಮಾತಿಗೊಂದಿಷ್ಟು ಎಲ್ಲರೂ ಕಿವಿಯಾದರು. ಅವರು ಹರಿಬಿಟ್ಟ ಪುನ್ಚಿಂಗ್ ಡೈಲಾಗ್ ಗಳಿಗೆ ನೆರೆದಿದ್ದವರೆಲ್ಲಾ ಜೋಶ್ ನಲ್ಲೆ ಚಪ್ಪಾಳೆ ತಟ್ಟಿದರು…

ಖುಷಿಯ ಅಲೆಯಲ್ಲಿ ತೇಲುತ್ತಿದ್ದ ವಿಪ್ರೊ ಕನ್ನಡಿಗರಿಗೆ ಅಚ್ಚರಿಯೊಂದು ಕಾದಿತ್ತು. ವಿಸ್ಮಯ ವೇದಿಕೆ ಮೇಲೆ ಒಮ್ಮೆಲೇ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಎಲ್ಲರ ಕಡೆಯೂ ಕೈ ಬೀಸಿದರು. ಸುದೀಪ್ ಕಾಣಿಸಿಕೊಂಡಿದ್ದೆ ತಡ, ಸಾವಿರಾರು ಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಆ ಕ್ಷಣ ಶಿಳ್ಳೆ, ಕೇಕೆಗಳ ಅಬ್ಬರ ಮುಗಿಲು ಮುಟ್ಟಿತ್ತು

ರಘು ದೀಕ್ಷಿತ್ ಮತ್ತು ಸುದೀಪ್ ಅಂದಿನ ವಿಸ್ಮಯದ highlight. ಜಸ್ಟ್ ಮಾತಿಗಿಳಿದ ಸುದೀಪ್ ವಿಪ್ರೊ ಕುರಿತು ಮೆಚ್ಚುಗೆಪಟ್ಟರು. ವಿಸ್ಮಯದ ಕುರಿತು ಹಾಡಿ ಹೊಗಳಿದರು. ಅದೂ ಸಾಲದೆಂಬಂತೆ ವೇದಿಕೆ ಮೇಲೆ ರಘು ದೀಕ್ಷಿತ್ ಜತೆ ಹಾಡುವ ಮೂಲಕ ರಂಜಿಸಿ ಹಾಗೆಯೇ ಮರೆಯಾದರು. ಮೈಸೂರ್ ಆನಂದ್ ರವರ ವಿಚಿತ್ರ ಹಾವ ಭಾವದಿಂದ ಕೂಡಿದ ನಗೆ ಹನಿಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು.

ಇದೆಲ್ಲದರ ನಡುವೆ ಜೂನಿಯರ್ ವಿಷ್ಣುವರ್ಧನ್ - ವಿಸ್ಮಯಕ್ಕಾಗೆ ಕನ್ನಡದ ಮೇರು ನಟ ವಿಷ್ಣುವರ್ಧನ್ ಮತ್ತೆ ಧರೆಗಿಳಿದು ಬಂದಂತಿತ್ತು. ಹಾಡು, ಹಾಸ್ಯ ಮತ್ತು ನೃತ್ಯದಿಂದ ತುಂಬಿದ ಈ ಕಾರ್ಯಕ್ರಮವನ್ನು 5000ಕ್ಕು ಹೆಚ್ಚು ಜನ ನೋಡಿ ಆನಂದಿಸಿದರು. ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು. IT ಹುಡುಗರಲ್ಲೂ ಸಾಹಿತ್ಯದ ಅಭಿರುಚಿ ಇದೆ ಅನ್ನೋದನ್ನ ತೋರಿಸಿಕೊಟ್ಟದ್ದು ಮಲ್ಲಿಗೆ ಎಂಬ ಕನ್ನಡದ ಆಡಿಯೋ ಆಲ್ಬಮ್.

ವಿಪ್ರೋದ ಶ್ರೀಕಾಂತ್ ಚೂಡಾನಾಥ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಮಲ್ಲಿಗೆ ಆಲ್ಬಮ್ ಅಂದು ಕಿಚ್ಚ ಸುದೀಪ್ ಕೈಯಿಂದ ಬಿಡುಗಡೆಯಾಗಿದ್ದು ಮತ್ತೊಂದು ಸ್ಪೆಷಲ್. 

ಒಟ್ಟಿನಲ್ಲಿ ಬೇರೆ ಬೇರೆ ಕಂಪನಿಗಳಲ್ಲಿರುವ ಕನ್ನಡದ ಅಣ್ಣ-ತಮ್ಮಂದಿರಲ್ಲೂ ತಮ್ಮ ತಮ್ಮ ಸಂಸ್ಥೆಗಳಲ್ಲಿ ಕನ್ನಡ ನಾಡಹಬ್ಬ ಮಾಡಬೇಕೆಂಬ ಉತ್ಸಾಹ ತುಂಬುವುದರಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು.