ನವೆಂಬರ್ ೧೨, ಗುರುವಾರದಂದು, ನಮ್ಮ ಅಲ್ಕಟೆಲ್-ಲ್ಯೂಸೆಂಟ್ ನಲ್ಲಿ, "ಶ್ರೀಗಂಧ ಕನ್ನಡ ಬಳಗ" ದ ನೇತೃತ್ವದಲ್ಲಿ "ಕನ್ನಡ ರಾಜ್ಯೋತ್ಸವ" ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅಂದು ಎಲ್ಲೆಲ್ಲೂ ಹಬ್ಬದ ವಾತಾವರಣ. ಬೆಳಿಗ್ಗೆ ಎಲ್ಲರನ್ನೂ ಮೊದಲು ಸ್ವಾಗತಿಸಿದ್ದು ಮಾವಿನ ತೋರಣಗಳು, ಹೂವಿನ ಗುಚ್ಛಗಳು, ದೀಪಾಲಂಕೃತವಾಗಿ ನಿಂತಿದ್ದ ಕನ್ನಡಾಂಬೆ ಹಾಗೂ ಕರ್ನಾಟಕದ ಭೂಪಟ ಮತ್ತು ಬಾವುಟಗಳನ್ನೊಳಗೊಂಡ ಸುಂದರ ರಂಗೋಲಿ. ಅದಕ್ಕೆ ಪೂರಕವಾಗಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೆಂಬಂತೆ ಅಲ್ಲಿಯೇ ಪಕ್ಕದಲ್ಲಿ ಹೆಮ್ಮೆಯಿಂದ ನಿಂತಿತ್ತು ಮೈಸೂರಿನ ಅರಮನೆ ಮತ್ತು ಜಂಬೂಸವಾರಿ.
ಕಾರ್ಯಕ್ರಮವನ್ನು ಕೇವಲ ಕನ್ನಡಿಗರನ್ನು ಮಾತ್ರವಲ್ಲದೇ, ಕನ್ನಡೇತರರ ಸಹೋದ್ಯೋಗಿಗಳನ್ನೂ ಸೇರಿಸಿಕೊಂಡು ಯೋಜಿಸಲಾಗಿತ್ತು. ಹಲವು ದಿನಗಳಿಂದ ಸಹೋದ್ಯೋಗಿಗಳನ್ನು ಕುತೂಹಲಕ್ಕೀಡು ಮಾಡಿದ್ದ ಆಹ್ವಾನ ಫಲಕ, ಎಲ್ಲರೂ ತಮ್ಮದೇ ರೀತಿಯಲ್ಲಿ ಹಬ್ಬಕ್ಕೆ ಅಣಿಯಾಗಲು ಅನುವು ಮಾಡಿಕೊಟ್ಟಿತ್ತು. ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು.
ದಿನ ಪೂರ್ತಿ, ಉಪಹಾರ ಮಂದಿರದಲ್ಲಿ ಕನ್ನಡದ ಸುಮಧುರ ಹಾಡುಗಳು, ಕನ್ನಡದ ಬಗೆಗಿನ ದೃಶ್ಯಾವಳಿಗಳು ಜನಮನ ತಣಿಸಿತ್ತು. ಟೋಟಲ್ ಕನ್ನಡ.ಕಾಂ ನವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆ, ಸಾಹಿತ್ಯ, ಚಲನಚಿತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಹಾಡಿನ ಮುದ್ರಿಕೆಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಕನ್ನಡಿಗರನ್ನು ಸೆರೆಹಿಡಿದರೆ, ಪ್ರವಾಸೋದ್ಯಮ ಇಲಾಖೆಯ ಕೈಪಿಡಿಗಳ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿ, ಕನ್ನಡೇತರ ಮಿತ್ರರ ಆಸಕ್ತಿ ಕೆರಳಿಸಿತ್ತು.
ಅಂದುಕೊಂಡಂತೆ, ಸಂಜೆ ೪ ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹೊತ್ತಿಗೆ, ನಿರೀಕ್ಷೆಗೂ ಮೀರಿ ಕಿಕ್ಕಿರಿದು ಸೇರಿದ್ದ ಕನ್ನಡ ಪ್ರೇಮಿಗಳನ್ನು ನೋಡಿ ಹೃದಯ ತುಂಬಿಬಂದಿತ್ತು. ನಮ್ಮ ಕಛೇರಿಯ ಮುಖ್ಯಸ್ಥೆ ಶ್ರೀಮತಿ ಚಿತ್ರಾ ಕಸ್ತೂರಿಯವರು ಸಾಂಪ್ರದಾಯಿಕವಾಗಿ ದೀಪ ಬೆಳಗುತ್ತಿದ್ದರೆ, ಹಿನ್ನೆಯಲ್ಲಿ "ಹಚ್ಚೇವು ಕನ್ನಡ ದೀಪ" ದ ನೃತ್ಯ ಮತ್ತು ಹಾಡು ಮೇಳೈಸುತ್ತಿತ್ತು.
ಬಳಗದ ಪರಿಚಯ ಮತ್ತು ಅದರ ಧ್ಯೇಯೋದ್ದೇಶಗಳ ಬಗೆಗಿನ ನಿರೂಪಣೆ, ಬಳಗದ ಬಗೆಗೆ ಗೌರವ ಮತ್ತು ಆತ್ಮೀಯತೆಯನ್ನು ಮೂಡಿಸಿತು. ಪೂರ್ವಭಾವಿಯಾಗಿ ನಡೆಸಲ್ಪಟ್ಟ, ನಮ್ಮ ಶಾಲಾದಿನಗಳನ್ನು ನೆನಪಿಸುವಂಥ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಮತ್ತು ಚಿತ್ರವಿನ್ಯಾಸ ಸ್ಪರ್ಧೆಗಳ ವಿಜೇತರಿಗೆ ಪುಸ್ತಕಗಳು, ಮುದ್ರಿಕೆಗಳ ರೂಪದಲ್ಲಿ ಬಹುಮಾನ ವಿತರಿಸಲಾಯಿತು.
ನಂತರ, ದೀಪಾವಳಿಯ ನಭದಲ್ಲಿ ಒಂದಾದರೊಂದಂತೆ ಅಪ್ಪಳಿಸುವ ಹೂಬಾಣಗಳಂತೆ, ಬಣ್ಣ-ಬಣ್ಣದ ರಂಜನೀಯ ಕಾರ್ಯಕ್ರಮಗಳು ಸಭಿಕರನ್ನು ಕಾಲದ ಪರಿವಿರದಂತೆ ಹಿಡಿದಿಟ್ಟವು. ಭಾವಗೀತೆ, ವಿಶೇಷ ವಾದ್ಯಸಂಗೀತ, ಚಿತ್ರಗೀತೆ, ನಗೆ ನಾಟಕ, ಯಕ್ಷಗಾನದ ಹಾಡು, ಅರ್ಜುನ - ಬಬ್ರುವಾಹನರ ವೀರಾವೇಶ, ಸಮೂಹಗಾನ, ರತ್ನನ ಪದಗಳ ಕುಡುಕನ ಕನ್ನಡಾಭಿಮಾನವನ್ನು ಆಹಾವಹಿಸಿಕೊಂಡ ಕಿರು ನಾಟಕ, ನಾಡಗೀತೆ ಹಾಗೂ ಹಲವು ಕನ್ನಡ ಚಿತ್ರಗೀತೆಗಳ ಸಮೂಹ ನೃತ್ಯ ಕಿವಿ-ಕಣ್ಣಿಗಾದರೆ, ಕಾಯಿ ಹೋಳಿಗೆ, ಬೆಳಗಾವಿ ಕುಂದ, ಅವಲಕ್ಕಿ ಖಾರ ನಾಲಿಗೆಯನ್ನು ತಣಿಸಿದವು.
ಈ ವಿನೋದಾವಳಿಗಳ ಮಧ್ಯೆ ಕನ್ನಡಿಗರಿಗೆ, ಕನ್ನಡೇತರರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂತಹ ರಸಪ್ರಶ್ನೆಗಳು ಅಣುಬಾಂಬ್ ಗಳಂತೆ ಸಿಡಿಯುತ್ತಾ ಎಲ್ಲರ ಜ್ಞಾನವನ್ನು ಒರೆಗೆ ಹಚ್ಚಿದವು. ಕಾರ್ಯಕ್ರಮದ ಕೊನೆಗೆ ನಾಡಗೀತೆಯನ್ನು ಹಾಡುತ್ತಿದ್ದಂತೆ, ಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದಾಗ ಎಲ್ಲರ ಮೈಯಲ್ಲೂ ಮಿಂಚು ಹರಿದ ಭಾವ.
ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು.
ಹೆಚ್ಚಿನ ಚಿತ್ರಗಳು ಇಲ್ಲಿವೆ:
ದೃಶ್ಯಗಳು:
No comments:
Post a Comment