Wednesday, December 3, 2008

ಓರೆಕಲ್ ನಾಡ ಹಬ್ಬ

ಸಂಸ್ಥೆ: ಓರೆಕಲ್ , ಬೆಂಗಳೂರು
ದಿನಾಂಕ: 27 ನವೆಂಬರ್ 2008

ಕರ್ನಾಟಕ ರಾಜ್ಯೋತ್ಸವವನ್ನು ೨೭-ನವಂಬರ್-೨೦೦೮ ರಂದು ಓರೇಕಲ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ ನಡೆಸಿಕೊಟ್ಟ ರಸಸಂಜೆಯು ಸುಮಾರು ೧೫೦ ಜನರನ್ನು ೨ ಗಂಟೆಗಳ ಕಾಲ ರಂಜಿಸಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಪ್ರಾರಂಭಿಸಲಾಯಿತು, ಹಿನ್ನೆಲೆಯಲ್ಲಿ ಮೂಡಿಬಂದ "ಹಚ್ಚೇವು ಕನ್ನಡದದೀಪ" ಸಂದರ್ಭಕ್ಕೆ ತಕ್ಕದಾಗಿತ್ತು.

ಕರ್ನಾಟಕ ಇತಿಹಾಸದ ಹಾಗೂ ಕರ್ನಾಟಕ ಏಕೀಕರಣದ ಸಂಕ್ಷಿಪ್ತ ವಿವರಣೆಯು ಕರ್ನಾಟಕ ರಾಜ್ಯೊತ್ಸವಾಚರಣೆಯ ಔಚಿತ್ಯವನ್ನು ಸಾರಿತು. ಪುಟ್ಟ ಮಗು ಸಂಜನಾಳ "ಕಟ್ಟೇವು ಕಂಕಣವ" ಹಾಡು ಸುಶ್ರಾವ್ಯವಾಗಿತ್ತು. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿನ ಕವಿವಾಣಿಯ ಕಳಕಳಿಯ ಕರೆ ಸಭಿಕರನ್ನು ಆತ್ಮಾವಲೋಕನಕ್ಕೆ ಒರೆಹಚ್ಚಿತು.

"ಆಪಾರಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು", ಹಾಡಿಗೆ ಪ್ರೇಕ್ಷಕರು ಮಂತ್ರಮುಗ್ದರಾದರು. ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ, ಪದಬಂಧ, ಕನ್ನಡ ವ್ಯಾಕರಣ, ವ್ಯವಹಾರಿಕ ಕನ್ನಡ, ಕನ್ನಡ ಕೈಬರಹ ಸ್ಪರ್ಧೆಗಳು ಕಂಪನಿಯಲ್ಲಿ ಹಬ್ಬದವಾತಾವರಣ ಸೃಷ್ಟಿಸಿದವು.

ಸಭಿಕರಿಗಾಗೇ ನಡೆಸಿದ "ಥಟ್ಟಂತ ಹೇಳಿ" ರಸಪ್ರಶ್ನಾವಳಿಗಳಿಗೆ, ಮುಗಿಬಿದ್ದು ಉತ್ತರಿಸಿ ಪುಸ್ತಕವನ್ನು ಬಹುಮಾನವಾಗಿ ಪಡೆದರು. "ಚೋಮನದುಡಿ", "ನನ್ನದೇವರು", "ಕೊಳಲು", "ದೇವರು", "೩೦ ದಿನಗಳಲ್ಲಿ ಕನ್ನಡಕಲಿಯಿರಿ" ಹೀಗೆ ಹಲವು ಅಪರೂಪದ ಪುಸ್ತಕಗಳನ್ನು ನೀಡಲಾಯಿತು. ಆಶುಭಾಷಣದ ವಿಷಯಗಳು ಹತ್ತು ಹಲವು ಚರ್ಚೆ ವಿಚರ್ಚೆಗಳಿಗೆ ಗ್ರಾಸವಾಯಿತು. ಸಮಾಜ ಸೇವಕರ ಸಮೀತಿಯ ಸಹಯೊಗದೊಂದಿಗೆ ಕನ್ನಡ ಕಗ್ಗಗಳ "ಟೀ ಶರ್ಟ"ಗಳನ್ನು ನೂರಾರು ನೊಂದಾಯಿತ ಆಸಕ್ತರಿಗೆ ಹಂಚಲಾಯಿತು. ಈ "ಟೀ ಶರ್ಟ"ಗಳನ್ನು ಧರಿಸಿಬಂದ ಉತ್ಸಾಹಿ ಪ್ರೇಕ್ಷಕರಿಂದ ಸಭೆಗೆ ಕಳೆಕಟ್ಟಿತ್ತು. "ಕಾರಂತ", ಕುವೆಂಪು", "ಬೇಂದ್ರೆ", "ಮಾಸ್ತಿ" "ಸುಧಾ ಮೂರ್ತಿ", "ಪೂಚಂತೆ" ಹೀಗೆ ಹಲವು ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಪ್ರರ್ದಶನಕ್ಕೆ ಇಡಲಾಗಿತ್ತು. "ಕುಮಾರ ವ್ಯಾಸ ಮತ್ತು ತಿಮ್ಮಣ್ಣ ಕವಿಯ ಗದುಗಿನ ಭಾರತ", ಅಪರೂಪ ಪುಸ್ತಕಗಳೂ ಪ್ರದರ್ಶನಕಿದ್ದವು. ಈ ಏಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡೇತರರೂ ಉತ್ಸಾಹದಿಂದ ಪಾಲ್ಗೊಂಡರು.

ಅಚ್ಚುಕಟ್ಟಾಗಿ ಆಯೋಜಿಸಿದ ಈ ಸುಂದರ ಸಾಂಸ್ಕ್ರತಿಕ ರಸಸಂಜೆ ಮನೋರಂಜನೆಯೊಂದಿಗೆ, ಕನ್ನಡ, ಕರ್ನಾಟಕದ ಇತಿಹಾಸದ ಬಗ್ಗೆ ಜಾಗ್ರತಿಯುಂಟುಮಾಡಿತು. ಈ ಒಂದು ಪ್ರಯತ್ನ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದ ಬಗ್ಗೆ ಇರುವ ಕಳಕಳಿಯು ಹೆಮ್ಮರವಾಗಿ ಬೆಳೆಯಲಿ ಎಂಬ ಅಶಾ ಭಾವನೆ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮವು ಕರ್ನಾಟಕದ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ" ಹಾಡಿನೊಂದಿಗೆ ಸಮಾರೋಪವಾಯಿತು.


ಚಿತ್ರಗಳು:



ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/nandisha/KarnatakaRajyotsava#

ಧನ್ಯವಾದಗಳು,
ಓರೆಕಲ್ ಕನ್ನಡಿಗರು

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

No comments:

Post a Comment