Tuesday, January 20, 2009

ವಿಪ್ರೋ ನಾಡಹಬ್ಬ

ವಿಪ್ರೋದಲ್ಲಿ ಉಕ್ಕಿದ ಕನ್ನಡ ಕಸ್ತೂರಿ

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡ ಕವಿ ಕುವೆಂಪುರವರ ಕಾವ್ಯವಾಣಿಯನ್ನು ನಿಜವಾಗಿಸುತ್ತಿದ್ದಾರೆ ವಿಪ್ರೊ ಸಂಸ್ಥೆಯ ಕನ್ನಡಮ್ಮನ ಕಂದಮ್ಮಗಳು.

ಕಳೆದ ಜನವರಿ 8 ರಂದು, 4ನೆ ವಾರ್ಷಿಕ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ "ವಿಸ್ಮಯ"ವನ್ನು ಅಲ್ಲಿನ ಕನ್ನಡ ಮಿತ್ರರು ಆಚರಿಸಿದರು. ನಾವು ತುಂಬ ಹೆಮ್ಮೆ ಪಡಬೇಕಾದ ವಿಷಯವೇನೆಂದರೆ ವಿಪ್ರೋನಲ್ಲಿ, ವಿಸ್ಮಯದ ರೂವಾರಿ ನರಸಿಂಗ ರಾವ್ ನೇತ್ರುತ್ವದಲ್ಲಿ ಕನ್ನಡ ಕಹಳೆಯನ್ನು ಊದಿ ದುಂದುಬಿ ಮೊಳಗಿಸುತ್ತಿರುವ ಸಮಾನ ಮನಸ್ಕ ಕನ್ನಡ ಮಿತ್ರರಿಗೆ ಅಲ್ಲಿನ ಕನ್ನಡಿಗರು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿ ಭಾಗವಹಿಸುತ್ತಿದ್ದಾರೆ.

ಕಳೆದ 4 ವರ್ಷಗಳಿಂದ ವಿಸ್ಮಯವನ್ನು ಆಚರಿಸುತ್ತಿರುವ ಬಳಗ, ಈ ಬಾರಿ 4 ಸಾವಿರಕ್ಕೂ ಹೆಚ್ಚು ವಿಪ್ರೊ ಕನ್ನಡಿಗರನ್ನು ಸೇರಿಸಿ ಆಚರಿಸುವಂಥಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ವಿಪ್ರೊ ಟೆಕ್ನಾಲಜೀಸ್ ನ ಕುವೆಂಪು ರಂಗಮಂಚದ ಸಭಾಂಗಣದಲ್ಲಿ ನಡೆದ ‘ವಿಸ್ಮಯ’ ಸಮಾರಂಭಕ್ಕೆ, ಕರ್ನಾಟಕದ ಖ್ಯಾತ ದಿನಪತ್ರಿಕೆ, ವಿಜಯ ಕರ್ನಾಟಕದ ಸಂಪಾದಕ ‘ವಿಶ್ವೇಶ್ವರ ಭಟ್’' ವಿಶೇಷ ಅತಿಥಿಗಳಾಗಿ ಆಗಮಿಸಿ ಹಂಚಿಕೊಂಡ 'ವಕ್ರತುಂಡೋಕ್ತಿ'ಯ ಸ್ಯಾಂಪಲ್ಗಳು, ಹಾಸ್ಯದ ಟಚ್ ಇದ್ದ ಪತ್ರಿಕಾ ಪ್ರಪಂಚದ ಸ್ವಾರಸ್ಯಕರ ಘಟನೆಗಳು ಮತ್ತು ನವಿರಾದ ಆಗು - ಹೋಗುಗಳು, ಕಾರ್ಯಕ್ರಮದ ರಂಗೇರಿಸಿದವು. ಇದರ ಜೊತೆಗೆ ಹಾಸ್ಯ ಭಾಷಣಕಾರ ‘ಗಂಗಾವತಿ ಪ್ರಾಣೇಶ್(ಬೀಚಿ)’ರವರು ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

ಕನ್ನಡ ನಾಡಗೀತೆಯ ಹಿನ್ನೆಲೆಯಲ್ಲಿ ಅತಿಥಿಗಳು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ವಿಸ್ಮಯದಲ್ಲಿ ಮೊದಲ ಬಾರಿಗೆ ಜೋಡಿ ನಿರೂಪಣೆ ನಡೆಸಿಕೊಟ್ಟ ಕಿರುತೆರೆಯ ಸಂಜೀವ್ ಕುಲಕರ್ಣಿ ಹಾಗು ಅಪರ್ಣ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ನರಸಿಂಗ ರಾವ್ ಸ್ವಾಗತಿಸಿದರೆ, ರಾಘವೇಂದ್ರ ಕಮಲಾಕರ್, ಕಿರಣ್ ಕೃಷ್ಣ, ಮಂಜುನಾಥ್ ಸ್ವಾಮಿ, ವಾಸುಕಿ ಹಾಗು ಭಾಸ್ಕರ್, ಕಾರ್ಯಕ್ರಮ ಸುಗಮವಾಗಿ ಸಾಗುವಂತೆ ನಿಯಂತ್ರಿಸಿದರು. ಕಿವಿ ಇಂಪಾಗಿಸಿದ ಹಾಡುಗಳು, ಡ್ಯಾನ್ಸ್ ಕಾಂಪಿಟಿಶನ್ ನಡೆಯುತ್ತಿದೆ ಎಂಬಂತೆ ಒಂದಕ್ಕಿಂತ ಒಂದು ಅದ್ಭುತವಾಗಿದ್ದ ಡ್ಯಾನ್ಸ್ ಗಳು, ಎಲ್ಲರ ಕುತೂಹಲ ಹಿಡಿದಿಟ್ಟ ಹಾಸ್ಯಭರಿತ ಸ್ಕಿಟ್ ಮತ್ತು ಮೂಕಾಭಿನಯ , ಹೀಗೆ ಸತತವಾಗಿ 5 ಘಂಟೆಗಳ ಕಾಲ ಸಭಿಕರನ್ನು ರಂಜಿಸಿದವು .

ಇದೆಲ್ಲದರ ಜೊತೆಗೆ ಜೂನಿಯರ್ ರಾಜಕುಮಾರ್ ಹಾಗು ಜೂನಿಯರ್ ಶಂಕರನಾಗ್ ರವರ 'ಅಪೂರ್ವ ಸಂಗಮ' ಕ್ಕೆ ವೇದಿಕೆಯಾದದ್ದು ಈ ಬಾರಿಯ ವಿಸ್ಮಯದ ವಿಶೇಷ.

ಆ ದಿನ ಇದ್ದ ಹುರುಪು, ವಿಶ್ವಾಸ, ಅಭಿಮಾನ ನೋದಿದರೆ, ವಿಸ್ಮಯವು ವಿಪ್ರೋದ ಸಂಸ್ಕೃತಿ ಆಗುವದರಲ್ಲಿ ಯಾವುದೇ ಅನುಮಾನವಿಲ್ಲ. ಬಹಳ ಸೊಗಸಾಗಿ ಜರುಗಿದ ಕಾರ್ಯಕ್ರಮ ಎಲ್ಲರ ನೆನಪಿನಂಗಣದಲ್ಲಿ ಉಳಿಯುವಂತದಾಗಿತ್ತು
ಒಟ್ಟಾರೆ ಹೇಳಬೇಕೆಂದರೆ, ಕನ್ನಡದ ಬಗ್ಗೆ ಕಾಳಜಿ ಇಲ್ಲವೆಂಬ ಅಪವಾದ ಹೊತ್ತಿರುವ ಐಟಿ ಪ್ರಪಂಚದಲ್ಲಿ, ವಿಪ್ರೋದ ಕನ್ನಡ ಕಾರ್ಯಕ್ರಮ 'ವಿಸ್ಮಯವು' ಕನ್ನಡದ ಕಾರಂಜಿಯನ್ನು ಮನಮೋಹಕವಾಗಿ ಚಿಮ್ಮಿಸುವಲ್ಲಿ ಯಶಸ್ವಿಯಾಯಿತು.

ಚಿತ್ರಗಳು:















ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.