Friday, November 28, 2008

ವೇಲಂಕಣಿ ಸಾಫ್ಟವೇರ್ ನಲ್ಲಿ ನಾಡ ಹಬ್ಬ

ಸಂಸ್ಥೆ: ವೇಲಂಕಣಿ ಸಾಫ್ಟವೇರ್ಸ್, ಬೆಂಗಳೂರು
ದಿನಾಂಕ: 8 ನವೆಂಬರ್ 2008

ಎಲ್ಲರಿಗೂ ನಮಸ್ಕಾರ,

ನಮ್ಮ ’ವೇಲಂಕಣಿ’ ಸಂಸ್ಥೆಯಲ್ಲಿ ನವಂಬರ್ ೮ ೨೦೦೮ ರಂದು ’ಕನ್ನಡ ರಾಜ್ಯೋತ್ಸವವನ್ನು’ ಉತ್ಸಾಹದಿಂದ ಆಚರಿಸಿದೆವು. ನಾನು ಈ ಸಂಸ್ಥೆ ಸೇರಿದಾಗಿನಿಂದ ಇದು ಎರಡನೆ ಕನ್ನಡ ರಾಜ್ಯೋತ್ಸವ. ದಿನಗಳು ಹೇಗೆ ಕಳೆಯುತ್ತಿವೆ ಅಂತ ಆಶ್ಚರ್ಯ ಆಗುತ್ತೆ. ನಿನ್ನೆ ಮೊನ್ನೆ ಅಷ್ಟೆ ನಾವು ಮೊದಲನೆ ರಾಜ್ಯೋತ್ಸವ ಮಾಡಿದೆವು ಅಂತ ಅನಿಸ್ತಿದೆ :) ಈ ಬಾರಿ ನಮ್ಮ ಮಾನವ ಸಂಪನ್ಮೂಲ ಇಲಾಖೆಯ ಸಹೋದ್ಯೋಗಿಗಳು ರಾಜ್ಯೋತ್ಸವವನ್ನು ಆಚರಿಸಲು ಅವರಾಗಿಯೇ ಮುಂದೆ ಬಂದು, ನಮಗೆ ಆ ದಿನ ನಡೆಯುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಮ್ಮ ಸಹೋದ್ಯೋಗಿಗಳ ಉತ್ಸಾಹವು ಕೊಂಚ ಜಾಸ್ತಿಯೇ ಇತ್ತು ಅಂತ ಹೇಳ್ಬೇಕು. ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ರೀತಿ, ಧರಿಸಿದ್ದ ಸಾಂಪ್ರದಾಯಿಕ ತೊಡಿಗೆಗಳಿಂದ ಅದು ಸ್ಪಷ್ಟವಾಗಿತ್ತು :)

ಅಂದು ನಾವೆಲ್ಲರೂ ನಮ್ಮ ಸಂಸ್ಥೆಯ ಪಕ್ಕದ ಒಂದು ಸ್ಥಳದಲ್ಲಿ ಸರಿಯಾಗಿ ಸಂಜೆ ೪ ಘಂಟೆಗೆ ಸೇರಿದೆವು. ಕಾರ್ಯಕ್ರಮದ ನಿರೂಪಕರು ನಮ್ಮನ್ನೆಲ್ಲ ಸ್ವಾಗತಿಸುತ್ತ ನೆರೆದಿದ್ದ ಜನರನ್ನು ೨ ಸಾಲಿನಲ್ಲಿ ನಿಲ್ಲಿಸಿ ನಮ್ಮ ಸಂಸ್ಥೆಯ ಮುಂಭಾಗದಲ್ಲಿರುವ ಧ್ವಜಾರಾಹೋಣದ ಸ್ಥಳಕ್ಕೆ ಹೋಗಲು ಹೇಳಿದರು. ನಾವೆಲ್ಲ’ಸಿರಿಗನ್ನಡಮ್ ಗೆಲ್ಗೆ, ಸಿರಿಗನ್ನಡಮ್ ಬಾಳ್ಗೆ, ಜಯ ಕರ್ನಾಟಕ’ ಅಂತ ಘೋಷಗಳನ್ನು ಕೂಗುತ್ತ ಕನ್ನಡ/ಕರ್ನಾಟಕದ ಬಗ್ಗೆ ಬರೆದಿರುವ ಹಾಡುಗಳನ್ನು ಹಾಡುತ್ತ ನಡೆದೆವು.

ಕಾರ್ಯಕ್ರಮವು ವಿಘ್ನವಿನಾಶಕ ಗಣೇಶನ ಸ್ತುತಿಯಿಂದ ಶುರುವಾಯಿತು. ಅನಂತರ ನಿರೂಪಕರು ಕರ್ನಾಟಕದ ಉಗಮ, ರಾಜ್ಯೋತ್ಸವದ ಹಿನ್ನೆಲೆ, ’ಕರ್ನಾಟಕ’ ಎನ್ನುವ ಹೆಸರಿನ ಮತ್ತು ಹಳದಿ-ಕೆಂಪು ಬಣ್ಣದ ಧ್ವಜದ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ನೆರೆದಿದ್ದವರಿಗೆ ಇಂಗ್ಲೀಷಿನಲ್ಲಿ ತಿಳಿಸಿದರು. ನಿರೂಪಣೆಯ ಈ ಭಾಗ ಮಾತ್ರ ಆಂಗ್ಲ ಭಾಷೆಯಲ್ಲಿತ್ತು.

ತದನಂತರ ಕನ್ನಡದವರೇ ಆದ ನಮ್ಮ ಹಿರಿಯ ತಾಂತ್ರಿಕ ನಿರ್ದೇಶಕರೊಬ್ಬರು ಧ್ವಜಾರೋಹಣ ಮಾಡಿದರು. ಅವರು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಜುಬ್ಬಾ ಧರಿಸಿ ಬಂದಿದ್ದು ನಮಗೆಲ್ಲಾ ಅಚ್ಚರಿ ಮತ್ತು ಸಂತೋಷವನ್ನು ತಂದಿತ್ತು :) ೧೫ ನಿಮಿಷ ಮಾತಾಡಿದ ಅವರು ಕರ್ನಾಟಕ,ಕನ್ನಡ ಸಂಸ್ಕೃತಿ,ಕನ್ನಡಿಗರ ಸತ್ಕಾರ ಗುಣ ಹಾಗು ವಿಶಾಲ ಮನೋಭಾವ, ಕನ್ನಡ ಮಾತಾಡುವ ವಿಭಿನ್ನ ಶೈಲಿಗಳು ( ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ಹವ್ಯಕ ಕನ್ನಡ ಇತ್ಯಾದಿ ),ಕರ್ನಾಟಕ ಸಂಗೀತ, ಕೈಗಾರಿಕೆ ಹಾಗು ವಿವಿಧ ಕ್ಷೇತ್ರದಲ್ಲಿ ಭಾರತಕ್ಕೆ ಕನ್ನಡಿಗರ ಕೊಡುಗೆಗಳ ಬಗ್ಗೆ ಮಾತಾಡಿದರು. ಬೇರೆ ರಾಜ್ಯದಿಂದ ಇಲ್ಲಿಗೆ ಬಂದ ಜನರಿಗೆ ಕನ್ನಡ ಕಲಿಯಲು ಆಗ್ರಹಿಸಿದರು. ಕರ್ನಾಟಕವು ಒಂದು ರೀತಿ ವಿವಿಧ ಜಗತ್ತುಗಳು ಸಂಧಿಸುವ ತಾಣವಾಗಿದೆ ಮತ್ತು ಕರ್ನಾಟಕವು ಹವಾಗುಣ,ನೈಸರ್ಗಿಕ ಸಂಪನ್ಮೂಲಗಳು, ಔದ್ಯೋಗಿಕ ಅವಕಾಶಗಳು, ಸಾಮರಸ್ಯ ಇವೆ ಮುಂತಾದ ಅನುಕೂಲಗಳನ್ನು ಇಲ್ಲಿರುವವರಿಗೆ ಮತ್ತು ಕೆಲಸವನ್ನಿ ಅರಸಿ ಬರುವವರಿಗೆ ನೀಡುತ್ತದೆ. ಆದ್ದರಿಂದ ಇಲ್ಲಿ ನೆಲೆಸುವವರೆಲ್ಲರೂ ರಾಜ್ಯೋತ್ಸವದಂತ ದಿನಗಳನ್ನು ಆಚರಿಸಿ, ಆಚರಣೆಗಳಲ್ಲಿ ಪಾಲ್ಗೊಂಡು ಈ ರಾಜ್ಯಕ್ಕೆ ಒಂದು ವಿಧದಲ್ಲಿ ಕೃತಜ್ಙತೆಯನ್ನು ಸಲ್ಲಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ, ಇಷ್ಟೆಲ್ಲಾ ಅನುಕೂಲಗಳನ್ನು ಒದಗಿಸುತ್ತಿರುವ ಈ ರಾಜ್ಯದಲ್ಲಿ ನೆಲೆಸಿರುವ ನಮಗೆಲ್ಲರಿಗೂ ಈ ಸ್ಥಳವನ್ನು, ಕನ್ನಡ ಭಾಷೆಯನ್ನು ಗೌರವಿಸಿ ಪೂಜಿಸುವುದು ನಮ್ಮ ಭಾಗ್ಯವೇ ಆದ್ದರಿಂದ ಬೇರೆಯವರು ತಾವು ಹೊರಗಿನವರು ಅಂತಂದುಕೊಳ್ಳದೆ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಮತ್ತು ಸಾಧ್ಯವಾದರೆ ಈ ಸಂಸ್ಕೃತಿಗೆ ಈ ರಾಜ್ಯಕ್ಕೆ ಒಳ್ಳೆಯ ರೀತಿಯಲ್ಲಿ ಕೊಡುಗೆ ನೀಡಬೇಕು ಅಂತ ಹೇಳಿದರು. ತಮ್ಮ ಭಾಷಣದ ಕೊನೆಗೆ ’ಜೈ ಕರ್ನಾಟಕ’ ಎಂದು ೩ ಬಾರಿ ಹೇಳಿ ನಾವೆಲ್ಲರು ಅವರೊಟ್ಟಿಗೆ ಹೇಳುವಂತೆ ಮಾಡಿದರು.

ಇದಾದನಂತರ ವೇದಿಕೆ ನಮ್ಮದಾಯಿತು :) ೧೫-೨೦ ಸದಸ್ಯರಿದ್ದ ನಾವು ನಾಡಗೀತೆಯಾದ ಕು.ವೆಂ.ಪು ರವರ ’ಜಯ ಭಾರತ ಜನನಿಯ ತನುಜಾತೆ’ಯನ್ನು ಹಾಡಿದೆವು. ಗಾಯನದಲ್ಲಿ ಭಾಗವಹಿಸಿದವರೆಲ್ಲರೂ ನಾಡಗೀತೆ ಚೆನ್ನಾಗಿ ಬರಲು ಶಕ್ತಿ ಮೀರಿ ಪ್ರಯತ್ನಿಸಿದರು.ಹಾಡುವಾಗ ನಮ್ಮ ಸ್ನೇಹಿತರು ತೋರಿದ ಹೊಂದಾಣಿಕೆ ಮರೆಯಲಾರದಂತದು. ಏಕೆಂದರೆ ನಾವು ಅವತ್ತು ಕಾರ್ಯಕ್ರಮ ಶುರುವಾಗಲು ೩ ತಾಸು ಇದ್ದಾಗ ಮಾತ್ರ ಅಭ್ಯಾಸ ಮಾಡಿದ್ದೆವು. ಹಾಡುವ ರಾಗ, ಏರಿಳಿತಗಳು ಸರಿಯಾಗಿ ಬರುವಲ್ಲಿ ಯೂಟ್ಯೂಬ್ ನಲ್ಲಿ ನಮಗೆ ದೊರೆತ ನಾಡಗೀತೆಯ ದೃಶ್ಯಮುದ್ರಣದ ತುಣುಕು ಭಾರಿ ಸಹಾಯ ಮಾಡಿತು.

ನಂತರ ನಮ್ಮ ಸ್ನೇಹಿತರಿಬ್ಬರು ವೇದಿಕೆಗೆ ಬಂದು ನಮ್ಮ ಭಾಷೆಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ಮಾತಾಡಿದರು. ಹಳಗನ್ನಡ,ನಡುಗನ್ನಡ ಮತ್ತು ಹೊಸಗನ್ನಡದ ಕಾಲ, ಆ ಕಾಲದ ಶ್ರೇಷ್ಠ ಕವಿಗಳು, ಜ್ಞಾನಪೀಠ ಪ್ರಶಸ್ತಿವಿಜೇತರು ಮತ್ತು ಅವರ ಕೃತಿಗಳ ಬಗ್ಗೆ ಬೆಳಕು ಬೀರಿದರು.

ಅನಂತರ ನಮ್ಮ ಸಹೋದ್ಯೋಗಿಗಳೊಬ್ಬರು ಕರ್ನಾಟಕವನ್ನು ಚಂದವಾಗಿ ವರ್ಣಿಸುವ ಚಿತ್ರಿಸಿರುವ ಕವಿ ನಿಸಾರ್ ಅಹ್ಮದ್ ಅವರ ’ಜೋಗದ ಸಿರಿ ಬೆಳಕಿನಲ್ಲಿ’ ಹಾಡನ್ನು ಸೊಗಸಾಗಿ ಹಾಡಿದರು.

ಕೊನೆಯದಾಗಿ ಆಡಳಿತ ಸಿಬ್ಬಂದಿಯಲ್ಲೊಬ್ಬರು ವೇದಿಕೆಗೆ ಬಂದು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಕರು ನಿರೂಪಣೆಯ ಮಧ್ಯೆ ತಮ್ಮ ಹಾಸ್ಯ ಮಿಶ್ರಿತ ಮಾತುಗಳಿಂದ ಜನರನ್ನು ನಗಿಸಿ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟರು. ಇದೆಲ್ಲಾ ಆದ ಮೇಲೆ ಮೈಸೂರ್ ಪಾಕನ್ನು ನೆರೆದಿದ್ದವರಿಗೆಲ್ಲಾ ಹಂಚಿದರು. ರಾಜ್ಯೋತ್ಸವ ಕಾರ್ಯಕ್ರಮವು ಚೆನ್ನಾಗಿ ನೆರವೇರಿದ ಕಾರಣವೂ ಸೇರಿ ಮೈಸೂರು ಪಾಕ್ ತುಂಬಾನೆ ಸಿಹಿ ಆಗಿತ್ತು :)

ಕಾರ್ಯಕ್ರಮವು ಕೇವಲ ೧ ಘಂಟೆ ಮಾತ್ರ ನಡೆದಿದ್ದರೂ ನಮಗೆಲ್ಲ ಮರೆಯಲಾರದ ಅನುಭವವನ್ನು ನೀಡಿತು.ಕಾರಣಾಂತರಗಳಿಂದ ಈ ಬಾರಿ ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಲಿಲ್ಲವಾದರೂ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವದ ಆಚರಣೆ, ಸಹೋದ್ಯೋಗಿಗಳು ತೋರುತ್ತಿರುವ ಉತ್ಸುಕತೆಯನ್ನು ನೋಡಿ ಸಂತಸವಾಗುತ್ತಿದೆ.ಇದೇ ರೀತಿ ಹುಮ್ಮಸ್ಸನ್ನು ಉತ್ಸಾಹವನ್ನು ಎಲ್ಲರೂ ತೋರುತ್ತಿದ್ದರೆ ಇನ್ನು ಮುಂದೆ ’ಕನ್ನಡ ರಾಜ್ಯೋತ್ಸವ’ವು ವೇಲಂಕಣಿ ಸಂಸ್ಥೆಯಲ್ಲಿ ಕಡ್ಡಾಯ ಆಚರಣೆಯಾಗಿ ಜನಪ್ರಿಯವಾಗುವದರಲ್ಲಿ ಯಾವುದೇ ಸಂಶಯವಿಲ್ಲ.

ವಂದನೆಗಳೊಂದಿಗೆ,
ವೆಲಂಕಣಿ ಕನ್ನಡಿಗ

ಚಿತ್ರಗಳು:





















ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

No comments:

Post a Comment